More

    ನಿಖಿಲ್‌ನನ್ನು ಗೆಲ್ಲಿಸಿಕೊಡಿ ಮೊಮ್ಮಗನ ಪರ ಪ್ರಚಾರದಲ್ಲಿ ಗದ್ಗದಿತರಾದ ದೇವೇಗೌಡ

     ರಾಮನಗರ
    ನನಗೆ ಊಟ ಹಾಕಿದ ಜನ ನಿಖಿಲ್ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸದೊಂದಿಗೆ ರಾಮನಗರಕ್ಕೆ ಮತ ಕೇಳಲು ಬಂದಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮೊಮ್ಮಗನ ಪರ ಭರ್ಜರಿ ಪ್ರಚಾರ ನಡೆಸಿದರು.
    ಕ್ಷೇತ್ರ ವ್ಯಾಪ್ತಿಯ ಸುಗ್ಗನಹಳ್ಳಿಯಲ್ಲಿ ಸುಮಾರು ಒಂದು ಕಿಲೋ ಮೀಟರ್ ರೋಡ್‌ಶೋ ಮೂಲಕ ಶಕ್ತಿಯನ್ನು ಪ್ರದರ್ಶನ ಮಾಡಿದರು.

    1994ರ ಚುನಾವಣೆಯಲ್ಲಿ ರಾಮನಗರಕ್ಕೆ ಬಂದಾಗ ನನ್ನನ್ನು ಮನೆ ಮನೆಗೆ ಕರೆದುಕೊಂಡು ಹೋಗಿ ಮಹಾ ತಾಯಂದಿರು ಊಟ ಹಾಕಿ ಸಾಕಿದ್ದಾರೆ. ಯಾವ ಜನ ನನ್ನ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮಾಡಿದರೋ ಅದೇ ಜನರ ಮುಂದೆ ಇಂದು ಬಂದು ಕೈಚಾಚುತ್ತಿದ್ದೇನೆ. ನಿಖಿಲ್ ಅವರನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿ ಸೋಲಿಸಿದ್ದಾರೆ. ನೀವು ಯಾವುದೇ ಕಾರಣಕ್ಕೂ ಸೋಲಲು ಬಿಡುವುದಿಲ್ಲ ಎನ್ನುವ ನಂಬಿಕೆಯಿಂದ ಇಲ್ಲಿ ಬಂದಿದ್ದೇನೆ. ಅವನನ್ನು ಗೆಲ್ಲಿಸಿಕೊಡಿ ಎಂದು ಗದ್ಗದಿತರಾದರು.

    ಕುವಾರಸ್ವಾಮಿ ಕೊಟ್ಟ ಕಾರ್ಯಕ್ರಮ ಹಿಂದುಸ್ತಾನದಲ್ಲಿ ಯಾವ ಮುಖ್ಯಮಂತ್ರಿಯೂ ಕೊಟ್ಟಿಲ್ಲ. ಯಾರಾದರೂ ವಾತು ಕೊಟ್ಟಂತೆ ನಡೆದುಕೊಂಡ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಅನ್ನ ಭಾಗ್ಯಕ್ಕೆ ಹಣ ಇಟ್ಟು ಉಳಿದರೆ ಸಾಲಮನ್ನಾ ವಾಡಿ ಅಂತ ಹೇಳಿದ್ದ ಸಿದ್ದರಾಮಯ್ಯ ಬಜೆಟ್‌ನಲ್ಲಿ ವಾಕ್ ಔಟ್ ವಾಡಿದ್ದರು. ನಾನು ನಿಮ್ಮ ಬಳಿ ಕೈಚಾಚುತ್ತೇನೆ. ನಿಮ್ಮ ಮನೆ ಬಾಗಿಲಿಗೆ ಬಂದು ಕೇಳುತ್ತಿದ್ದೇನೆ. ಕುಮಾರಸ್ವಾಮಿ ಅವರನ್ನು ಬಲಪಡಿಸಲು ನಿಖಿಲ್ ಗೆಲ್ಲಿಸಿಕೊಡಿ, ಈ ಯುವಕನನ್ನು ಬೆಳೆಸಿ ಮುಂದೆ ಶ್ರೇಷ್ಠ ನಾಯಕನಾಗುತ್ತಾನೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
    ತಾತನ ಪ್ರಚಾರಕ್ಕೆ ರಾಮನಗರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಾಥ್ ನೀಡಿದರು.

    ನೀರಿನ ಹಕ್ಕು ಉಳಿಸಿಕೊಳ್ಳಲು ಆಗುತ್ತಿಲ್ಲ
    ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಇಳಿ ವಯಸ್ಸಿನಲ್ಲಿಯೂ ರೈತರಿಗೋಸ್ಕರ ಹೋರಾಟ ಮಾಡುತ್ತಿದ್ದೇನೆ. ಅರ್ಕಾವತಿ, ಇಗ್ಗಲೂರು ಜಲಾಶಯ ಕಟ್ಟಿದ್ದೇನೆ. ರಾಜ್ಯದ ಜನರಿಗೆ ನೀರಾವರಿ ಯೋಜನೆಗಳಲ್ಲಿ ಅನ್ಯಾಯವಾಗುತ್ತಿದೆ. ತಮಿಳರು ಸೇಲಂನಲ್ಲಿ ಏತ ನೀರಾವರಿ ಮೂಲಕ ಬತ್ತ ಬೆಳೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ಮೇಕೆದಾಟು ಯೋಜನೆ ಮಾಡಲು ಬಿಡುತ್ತಿಲ್ಲ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದರು.
    ಲೋಕಸಭೆಯಲ್ಲಿ ಬಿಜೆಪಿಯ 18 ಸಂಸದರು ಇದ್ದರೂ ನೀರಾವರಿ ವಿಚಾರ ಚರ್ಚೆ ಮಾಡಲು ಅನಂತ ಕುಮಾರ್ ಅವರಿಗೆ ಕೇಳಿಕೊಂಡಿದ್ದೆ, ಬೆಳಗ್ಗೆ ಹೇಳುತ್ತೇನೆ ಎಂದಿದ್ದ ಅವರು ನಂತರ ಸಿಗಲೇ ಇಲ್ಲ, ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳು ಗೆಲ್ಲಲು ಸಾಧ್ಯವಾಗಿಲ್ಲವಾದರೂ, ಅಲ್ಲಿ ಜನರು ಹೆಚ್ಚಿನ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ನೀರಿನ ಹಕ್ಕನ್ನು ಉಳಿಸಿಕೊಳ್ಳಲು ನಮಗೆ ಆಗುತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts