

ಚನ್ನಪಟ್ಟಣ
ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ. ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡರು ಈ ಎರಡು ಕಾರ್ಯಗಳು ಕಂಡುಬರುತ್ತಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಬಿ. ರಾಜು ಬೇಸರ ವ್ಯಕ್ತಪಡಿಸಿದರು.
ನಗರದ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಲಯನ್ಸ್ ಸಂಸ್ಥೆ ಹಾಗೂ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವೈದ್ಯರ ದಿನ ಹಾಗೂ ವಿಶ್ವ ಹೆಪಟೈಟೀಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧದ ಜೊತೆಗೆ ಮಹಾಪಾಪದ ಕೆಲಸ. ಭ್ರೂಣ ಪತ್ತೆ ಕಾರ್ಯಕ್ಕೆ ವ್ಯದ್ಯರಾಗಲಿ ಲ್ಯಾಬ್ಗಳಾಗಲಿ ಯಾವುದೇ ಕಾರಣಕ್ಕೂ ಸಹಕಾರ ನೀಡಬಾರದು. ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿತ ಕಾಣುತ್ತಿದೆ. ಸಾವಿರ ಪುರುಷರಿಗೆ 918 ಮಹಿಳೆಯರು ಇದ್ದಾರೆ. ಭ್ರೂಣ ಲಿಂಗ ಪತ್ತೆ ಮಾಡದಂತೆ ಸಾಕಷ್ಟು ಅರಿವು ಮೂಡಿಸುತ್ತಿದ್ದರು ಕಣ್ತಪ್ಪಿಸಿ ಭ್ರೂಣ ಲಿಂಗ ಪತ್ತೆ ಮಾಡುವ ಕಾರ್ಯಗಳು ನಡೆಯುತ್ತಿವೆ. ಇತ್ತೀಚಿಗೆ ಮಾಗಡಿಯಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಇದಕ್ಕೊಂದು ನಿರ್ದಶನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಸಂಪಂಗಿರಾಮಯ್ಯ ಮಾತನಾಡಿ, ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮದಿನಾಚರಣೆ ಮತ್ತು ಪುಣ್ಯಸ್ಮರಣೆಯ ಪ್ರಯುಕ್ತ ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅವರು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಅವರ ನೆನಪಿನಲ್ಲಿ ರಾಷ್ಟ್ರೀಯ ವೈದ್ಯ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ದೇಹ ಆರೋಗ್ಯವಾಗಿದ್ದರೆ ಯಾವುದನ್ನು ಸಹ ಪಡೆಯಬಹುದು. ಮನುಷ್ಯನಿಗೆ ಇರುವುದು ಒಂದೇ ಲಿವರ್. ಆದ್ದರಿಂದ ನಾವು ನಮ್ಮ ಲಿವರ್ ಕುರಿತು ಜಾಗ್ರತೆ ವಹಿಸಬೇಕು. ಲಿವರ್ ಹಾಳಾದರೆ ಅದು ನಮ್ಮ ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯಬೇಕು. ಮದ್ಯಪಾನ ಮುಂತಾದ ಲಿವರ್ಗೆ ಹಾನಿಕರವಾದ ದ್ರವ್ಯ ಹಾಗೂ ಆಹಾರಗಳಿಂದ ದೂರವಿದ್ದು ಆರೋಗ್ಯವಂತ ಬದುಕು ಗಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಂತರಿಕ ವೈದ್ಯಕೀಯ ಸಲಹೆಗಾರ ಡಾ. ಹೇಮಂತ್ ಹೈಪಟೈಟಿಸ್ ಬಗ್ಗೆ ಉಪನ್ಯಾಸ ನೀಡಿ, ಹೆಪಟೈಟಿಸ್ನ ವಿಧಗಳು, ಅದರಿಂದಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ವಿಶ್ವ ವೈದ್ಯ ದಿನಾಚರಣೆ ಪ್ರಯುಕ್ತ ಡಾ. ಬಸವರಾಜು ಹಾಗೂ ಡಾ. ಶೈಲಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷ ತಿಪ್ರೇಗೌಡ, ಕಾರ್ಯದರ್ಶಿ ಚಂದ್ರೇಗೌಡ, ಸದಸ್ಯರಾದ ವೆಂಕಟಸುಬ್ಬಯ್ಯ ಚೆಟ್ಟಿ, ವಸಂತ್ಕುಮಾರ್, ವೈದ್ಯರಾದ ಡಾ. ಜಯಂತಿ, ಡಾ. ಮಹೇಂದ್ರ, ಡಾ.ರಾಜಶ್ರೀ, ರಾಧಿಕಾ ರವಿಕುಮಾರ್ಗೌಡ, ಶಿಕ್ಷಣ ಸಂಯೋಜಕ ಯೋಗೀಶ್ ಚಕ್ಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.