ಸಿನಿಮಾ

ನಿಗಮ-ಮಂಡಳಿಗೆ ಮೇಲೆ ಕಣ್ಣು ನಾಯಕರ ಬೆನ್ನು ಬಿದ್ದಿರುವ ಆಕಾಂಕ್ಷಿಗಳು ಮಂತ್ರಿಮಂಡಲ ವಿಸ್ತರಣೆಗೂ ಮುನ್ನವೇ ಲಾಬಿ

ಗಂಗಾಧರ್ ಬೈರಾಪಟ್ಟಣ ರಾಮನಗರ
ಹೊಸ ಸರ್ಕಾರ ರಚನೆ ಆಗಿ ಬಾಕಿ ಉಳಿದಿರುವ ಸಚಿವ ಸ್ಥಾನಗಳ ಭರ್ತಿ ಜವಾಬ್ದಾರಿ ದೆಹಲಿಗೆ ಶಿಫ್ಟ್ ಆಗಿಯೂ ಆಗಿದೆ. ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ನಿಗಮ ಮಂಡಳಿಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಇದಕ್ಕಾಗಿ ತಮ್ಮ ನಾಯಕರ ಬೆನ್ನು ಬಿದ್ದಿದ್ದಾರೆ.

ಈ ಬಾರಿ ಮೂರು ಸ್ಥಾನಗಳನ್ನು ಗೆದ್ದು ಜಿಲ್ಲೆಯಲ್ಲಿ ಕೈ ಬಲಪಡಿಸಲಾಗಿದೆ. ಇದೀಗ ಇದಕ್ಕಾಗಿ ದುಡಿದವರು ನಿಗಮ ಮಂಡಳಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಸೋಲಿಸಲು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಶಾಸಕ ಕೆ.ರಾಜು, ಹಾಲಿ ನಗರಸಭೆ ಸದಸ್ಯ ಹಾಗೂ ಎಂಇಐನ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ ಹಾಗೂ ಕನಕಪುರದ ದುಂತೂರು ವಿಶ್ವನಾಥ್ ಪ್ರಮುಖರಾಗಿದ್ದಾರೆ.

ಗೆಲುವಿನ ರೂವಾರಿಗಳು
ರಾಮನಗರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪ್ರಭಾವ ತಗ್ಗಿಸಿ ಇಕ್ಬಾಲ್ ಹುಸೇನ್ ಅವರ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಇಕ್ಬಾಲ್ ಹುಸೇನ್ ಅವರು ಮತದಾರರೊಂದಿಗೆ ಇಟ್ಟುಕೊಂಡಿದ್ದ ನಿರಂತರ ಸಂಪರ್ಕ ಹಾಗೂ ಸ್ಥಳೀಯ ಮುಖಂಡರ ಹೋರಾಟದ ಫಲವಾಗಿ ಜಯ ದಕ್ಕಿದೆ. ಇದರಲ್ಲಿ ಪ್ರಮುಖ ಪಾತ್ರವಹಿಸಿದರು ಮಾಜಿ ಶಾಸಕ ಕೆ.ರಾಜು ಹಾಗೂ ನಗರಸಭೆ ಸದಸ್ಯ ಕೆ.ಶೇಷಾದ್ರಿ ಎಂದರೆ ತಪ್ಪಾಗಲಾರದು.

ಮಾಜಿ ಶಾಸಕ ಕೆ.ರಾಜು ಅವರು ಗ್ರಾಮೀಣ ಭಾಗವಾದ ಕೈಲಾಂಚ ಹೋಬಳಿಯಲ್ಲಿ ಲೀಡ್ ಪ್ರಮಾಣವನ್ನು ಕಡಿಮೆ ಮಾಡಲು ಶ್ರಮ ವಹಿಸಿದರೆ, ಕೆ.ಶೇಷಾದ್ರಿ ನಗರ ಪ್ರದೇಶದಲ್ಲಿ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್‌ಗೆ ಸೆಳೆದವರಲ್ಲಿ ಮೊದಲಿಗರು. ಇದರ ಪರಿಣಾಮ ಇಕ್ಬಾಲ್ ಹುಸೇನ್ ಅವರ ಗೆಲುವು ಸಲೀಸಾಯಿತು. ಆದೇರೀತಿ ಪಿ. ನಾಗರಾಜು, ಪ್ರಾಣೇಶ್ ಹೀಗೆ ಹಲವಾರು ಮಂದಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಉನ್ನತ ಹುದ್ದೆಗೆ ಗಾಳ
ಲಭ್ಯ ಮಾಹಿತಿ ಪ್ರಕಾರ ಕೆ.ಶೇಷಾದ್ರಿ ಮತ್ತು ಕೆ.ರಾಜು ಇಬ್ಬರೂ ರಾಜ್ಯಮಟ್ಟದ ನಿಗಮ – ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ತಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಒಂದೆಡೆ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವ ಇಬ್ಬರೂ ತಮ್ಮ ಆಪ್ತ ಹಿರಿಯ ನಾಯಕರ ಮೂಲಕವೂ ನಿಗಮ ಮಂಡಳಿಗಳ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಪುತ್ರನನ್ನೇ ಸೋಲಿಸಿರುವ ಇಕ್ಬಾಲ್ ಹುಸೇನ್ ಸಹ ಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದರೂ, ಇದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ, ಒಂದು ವೇಳೆ ಮಂತ್ರಿ ಸ್ಥಾನ ಮಿಸ್ ಆದರೂ ನಿಗಮ ಮಂಡಳಿ ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಮಂತ್ರಿ ಸ್ಥಾನಗಳ ಭರ್ತಿಯಾದ ನಂತರವಷ್ಟೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಭರ್ತಿಯಾಗಲಿವೆ. ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನವನ್ನು ಹಿರಿಯ ಶಾಸಕರು ಮತ್ತು ನಾಯಕರಿಗೆ ಮೀಸಲಿಡಬೇಕಿರುವ ಕಾರಣ, ರಾಮನಗರ ಜಿಲ್ಲೆಗೆ ಯಾವ ನಿಗಮ ಲಭ್ಯವಾಗಲಿದೆ ಕಾದು ನೋಡಬೇಕಿದೆ.

ಪ್ರಾಧಿಕಾರಗಳಿಗೂ ಫೈಟ್
ಜಿಲ್ಲೆಯಲ್ಲಿ ನಾಲ್ಕು ಯೋಜನಾ ಪ್ರಾಧಿಕಾರಗಳಿದ್ದು, ಇವುಗಳ ಮೇಲೂ ಟವಲ್ ಹಾಸಿ ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಆಯಾ ಕ್ಷೇತ್ರಗಳಿಗೆ ಅನುಗುಣವಾಗಿ ತಮ್ಮ ಶಾಸಕರ ಮೂಲಕ ಸ್ಥಾನ ಪಡೆಯಲು ಯತ್ನಿಸಿದ್ದಾರೆ. ಆದರೆ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರು ಸೂಚಿಸುವ ವ್ಯಕ್ತಿ ಅಧ್ಯಕ್ಷರಾಗಲಿದ್ದು, ಅದೇ ರೀತಿಯಲ್ಲಿ ಮಾಗಡಿಯಲ್ಲಿ ಎಚ್.ಸಿ. ಬಾಲಕೃಷ್ಣ ಹಾಗೂ ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಅವರು ಸೂಚಿಸಿದ ವ್ಯಕ್ತಿಯ ಹೆಸರು ಅಂತಿಮವಾಗಲಿದೆ. ಇನ್ನು ಚನ್ನಪಟ್ಟಣದ ಆಯ್ಕೆಯಲ್ಲಿ ಸಂಸದ ಡಿ.ಕೆ. ಸುರೇಶ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಒಟ್ಟಾರೆ, ಮಂತ್ರಿ ಮಂಡಲ ವಿಸ್ತರಣೆಗೂ ಮುನ್ನವೇ ನಿಗಮ ಮಂಡಳಿಗಳ ಮೇಲೆ ಜಿಲ್ಲೆಯ ಪ್ರಮುಖ ಮುಖಂಡರ ಕಣ್ಣು ಬಿದ್ದಿದೆ.

Latest Posts

ಲೈಫ್‌ಸ್ಟೈಲ್