

ರಾಮನಗರ: ಅಮಾಯಕರ ಎಟಿಎಂನಿಲ್ಲಿ ಹಣ ದೋಚುತ್ತಿದ್ದ ಆರೋಪಿಯೊಬ್ಬನನ್ನು ಕನಕಪುರ ತಾಲೂಕಿನ ಸಾತನೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಧು(32) ಬಂಧಿತ ಆರೋಪಿ. ಹಲಗೂರು ಬಳಿಯ ಚಿಕ್ಕಎಲಚೆಗೆರೆ ಗ್ರಾಮದ ನಿವಾಸಿಯಾದ ಈತ ಕೂಲಿ ಕೆಲಸ ಮಾಡುವ ಹಾಗೂ ಅಶಿಕ್ಷಿತ ಜನರನ್ನು ಗುರಿಯಾಗಿಸಿಕೊಳ್ಳುತ್ತಿದ್ದ. ಅದರಲ್ಲೂ ಎಟಿಎಂನಿಂದ ಹಣ ಡ್ರಾ ಮಾಡಲು ಬರದ ಮುಗ್ಧ ಜನರೇ ಆರೋಪಿಯ ಪ್ರಮುಖ ಟಾರ್ಗೆಟ್.
ಹಣ ತೆಗೆದುಕೊಡುವ ನೆಪದಲ್ಲಿ ಎಟಿಎಂ ಪಡೆದು ಪಾಸ್ವರ್ಡ್ ಅನ್ನು ಗೊತ್ತಿಲ್ಲದಂತೆ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಹಣ ಪಡೆದ ಬಳಿಕ ಅದೇ ರೀತಿಯ ಮತ್ತೊಂದು ಎಟಿಎಂ ಕಾರ್ಡ್ ಅನ್ನು ಮುಗ್ಧ ಜನರಿಗೆ ನೀಡಿ ಯಾಮಾರಿಸುತ್ತಿದ್ದ. ಹಣ ಪಡೆದ ಖುಷಿಯಲ್ಲಿ ಜನರು ಹೋಗುತ್ತಿದ್ದಂತೆ ಎಟಿಎಂನಲ್ಲಿ ಹಣವನ್ನು ಎಗರಿಸುತ್ತಿದ್ದ. ಈತನಿಂದ ಹಣ ಕಳೆದುಕೊಂಡ ಬಹುತೇಕರು ಗ್ರಾಮೀಣ ಭಾಗದ ರೈತರು ಹಾಗೂ ಹಾಲು ಉತ್ಪಾದಕರೇ ಆಗಿದ್ದಾರೆ.
ಈ ಬಗ್ಗೆ ಪ್ರತ್ಯೇಕ ಮೂರು ಪ್ರಕರಣಗಳು ಸಾತನೂರು ಠಾಣೆಯಲ್ಲಿ ದಾಖಲಾಗಿದ್ದವು. ತನಿಖೆ ಕೈಗೊಂಡ ಪಿಎಸ್ಐ ಮುರಳಿ ತಂಡ ಆರೋಪಿ ಬಂಧಿಸಿದೆ. ಆತನಿಂದ 6 ಎಟಿಎಂ ಕಾರ್ಡ್, 28 ಸಾವಿರ ರೂ. ಹಣ, ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)