

ಅಯೋಧ್ಯೆ: ಕೋಟ್ಯಂತರ ರಾಮಭಕ್ತರ ಕನಸು ನನಸಾಗುವ ಕಾಲ ಮತ್ತಷ್ಟು ಹತ್ತಿರವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಅವರು ಮಂಗಳವಾರ ರಾಮಲಲ್ಲಾ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಭವ್ಯ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ.
ಮಂದಿರ ನಿರ್ಮಾಣ ಕಾರ್ಯ ಅಧಿಕೃತವಾಗಿ ಆರಂಭವಾಗಿರುವುದಾಗಿ ಗೋಪಾಲದಾಸ್ ಇದೇ ಸಂದರ್ಭದಲ್ಲಿ ಘೋಷಿಸಿದರು. ಲಾಕ್ಡೌನ್ ತೆರವುಗೊಂಡು ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಅಯೋಧ್ಯೆಯಲ್ಲಿ ಬೃಹತ್ ಸಮಾರಂಭ ಹಮ್ಮಿಕೊಳ್ಳುವ ಸಾಧ್ಯತೆ ಇದೆ.
ಅಯೋಧ್ಯೆಯ ತಾತ್ಕಾಲಿಕ ಮಂದಿರದಲ್ಲಿದ್ದ ರಾಮಲಲ್ಲಾ ಮೂರ್ತಿಯನ್ನು ಕಳೆದ ಮಾ.20ರಂದು ಮಾನಸ ಭವನಕ್ಕೆ ಪಲ್ಲಕ್ಕಿಯಲ್ಲಿ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹಾಜರಿದ್ದರು. 27 ವರ್ಷಗಳ ನಂತರ ರಾಮಲಲ್ಲಾ ಮೂರ್ತಿಯನ್ನು ತಾತ್ಕಾಲಿಕ ಮಂದಿರದಿಂದ ಹೊರತರಲಾಯಿತು.
4.70 ಕೋಟಿ ರೂ. ಸಂಗ್ರಹ: ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ವಣಕ್ಕೆ ಹಿಂದುಗಳಲ್ಲದೆ ಮುಸ್ಲಿಮರು ಸೇರಿದಂತೆ ವಿವಿಧ ಧರ್ಮೀಯರು ದೇಣಿಗೆ ನೀಡುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲೂ ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಎರಡು ಬ್ಯಾಂಕ್ ಖಾತೆಗಳಿಗೆ -ಠಿ; 4.70 ಕೋಟಿ ದೇಣಿಗೆ ಜಮೆಯಾಗಿದೆ.
ಟ್ರಸ್ಟ್ ಮಾರ್ಚ್ನಲ್ಲಿ ಅಯೋಧ್ಯೆಯ ಎಸ್ಬಿಐ ಮುಖ್ಯಶಾಖೆಯಲ್ಲಿ ಎರಡು ಖಾತೆಗಳನ್ನು ತೆರೆದ ನಂತರ ಡಿಜಿಟಲ್ ಪಾವತಿ ಮೂಲಕ ಐದು ಸಾವಿರಕ್ಕೂ ಹೆಚ್ಚು ಜನರು ಹಣ ಸಂದಾಯ ಮಾಡಿದ್ದಾರೆ. ಈ ಹಿಂದೆ ರಾಮ ಜನ್ಮಭೂಮಿ ನ್ಯಾಸ್ ಸಂಗ್ರಹಿಸಿದ -ಠಿ;12 ಕೋಟಿಯನ್ನು ಬೇರೊಂದು ಬ್ಯಾಂಕ್ನಲ್ಲಿ ಠೇವಣಿ ಇರಿಸಲಾಗಿದೆ. ಜತೆಗೆ -ಠಿ;1 ಕೋಟಿ ಮೌಲ್ಯದ ಚಿನ್ನಾಭರಣದ ಭಂಡಾರವೂ ನ್ಯಾಸ್ನಲ್ಲಿದೆ. ಕರೊನಾ ಪಿಡುಗು ಇರದಿದ್ದರೆ ದೇಣಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂದಾಯವಾಗುತ್ತಿತ್ತು. ಲಾಕ್ಡೌನ್ ಕಾರಣ ಜನರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಕೆಲವು ವಾರಗಳಿಂದ ದೇಣಿಗೆ ಮೊದಲಿನಷ್ಟು ಬರುತ್ತಿಲ್ಲ. ಆದರೆ ಪೂರ್ಣವಾಗಿ ನಿಂತಿಲ್ಲ. ಮಂದಿರ ನಿರ್ಮಾಣ ಕಾರ್ಯ ಚುರುಕುಗೊಂಡ ಮೇಲೆ ದೇಣಿಗೆ ಹರಿವು ಹೆಚ್ಚಳವಾಗಲಿದೆ ಎಂದು ಟ್ರಸ್ಟ್ನ ಸದಸ್ಯರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಹೇಳಿದ್ದು
ಶ್ರೀರಾಮ ಜನಿಸಿದ್ದು ಅಯೋಧ್ಯೆಯಲ್ಲೇ ಎಂಬ ಹಿಂದುಗಳ ನಂಬಿಕೆಯು ಅವಿವಾದಿತ ಮತ್ತು ವಿವಾದಿತ ಸ್ಥಳದಲ್ಲಿ ನಡೆದ ಉತ್ಖನನ ಕೂಡ ಮಂದಿರದ ಕುರುಹುಗಳನ್ನು ಶೋಧಿಸಿದೆ. ಆದ್ದರಿಂದ ವಿವಾದಿತ ಸ್ಥಳ ಹಿಂದುಗಳಿಗೆ ಸೇರಿದ್ದು
ವಿಗ್ರಹ ಪತ್ತೆ
ಸುಪ್ರೀಂಕೋರ್ಟ್ ಆದೇಶದ ಬಳಿಕ ರಾಮ ಜನ್ಮಭೂಮಿಯ ಸಮತಟ್ಟು ಕಾರ್ಯ ಆರಂಭವಾಗಿದ್ದು, ಇತ್ತೀಚೆಗಷ್ಟೇ ಸ್ಥಳದಲ್ಲಿ ಮಣ್ಣಿನಲ್ಲಿ ಹುದುಗಿದ್ದ ದೇವತೆಗಳ ಮೂರ್ತಿಗಳು, ಶಿವಲಿಂಗ ಪತ್ತೆಯಾಗಿದ್ದವು. ಇವು ರಾಮಮಂದಿರದ ಕುರುಹುಗಳನ್ನು ಸಾಕ್ಷೀಕರಿಸಿದ್ದವು.
ಜನರು ಉದಾರವಾಗಿ ದೇಣಿಗೆ ನೀಡುತ್ತಿದ್ದು, ಮಂದಿರ ನಿರ್ವಣಕ್ಕೆ ಹಣಕಾಸಿನ ತೊಡಕು ಆಗದು. ಭವ್ಯ ಮಂದಿರ ನಿರ್ಮಾಣ ಆಗುತ್ತದೆ. | ಆಚಾರ್ಯ ಸತ್ಯೇಂದ್ರ ದಾಸ್ ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕ
ಮಾಹಿತಿ ಬರಬೇಕಿದೆ
ರಾಮ ಮಂದಿರದ ಕೆತ್ತನೆ ಕೆಲಸ ಈಗಾಗಲೇ ನಡೆಯುತ್ತಿದೆಯಾದರೂ ಮಂದಿರ ಯಾವಾಗ ಪೂರ್ಣವಾಗುತ್ತದೆ, ನಿಖರವಾಗಿ ಎಷ್ಟು ವೆಚ್ಚವಾಗುತ್ತದೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಐತಿಹಾಸಿಕ ತೀರ್ಪು
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡದ ಶತಮಾನದ ವಿವಾದವನ್ನು ಸುಪ್ರೀಂಕೋರ್ಟ್ ಕಳೆದ ನ.9ರಂದು ಇತ್ಯರ್ಥಗೊಳಿಸಿತ್ತು. ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ಹಸ್ತಾಂತರಿಸಲು ಸೂಚಿಸಿದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ರಾಮಮಂದಿರ ನಿರ್ವಣಕ್ಕೆ 3 ತಿಂಗಳ ಒಳಗೆ ಟ್ರಸ್ಟ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಮಸೀದಿ ನಿರ್ವಿುಸಿಕೊಳ್ಳಲು ಸುನ್ನಿ ವಕ್ಪ್ ಮಂಡಳಿಗೆ ಅಯೋಧ್ಯೆಯಲ್ಲಿ ಐದು ಎಕರೆ ಜಾಗ ನೀಡುವಂತೆಯೂ ಆದೇಶಿಸಿತ್ತು. ಕಳೆದ ಫೆ.5ರಂದು ಕೇಂದ್ರ ಸರ್ಕಾರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚನೆ ಘೋಷಿಸಿತು. ಟ್ರಸ್ಟ್ನಲ್ಲಿ ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೇರಿ 15 ಸದಸ್ಯರಿದ್ದು, ಈ ಪೈಕಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ತಲಾ ಒಬ್ಬರು ಪದನಿಮಿತ್ತ ಪ್ರತಿನಿಧಿಗಳಾಗಿದ್ದಾರೆ. ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ನ ಪಂಚಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಎ.ಬೊಬ್ಡೆ, ಅಶೋಕ್ ಭೂಷಣ್, ಡಿ.ವೈ.ಚಂದ್ರಚೂಡ್ ಮತ್ತು ಎಸ್.ಅಬ್ದುಲ್ ನಜೀರ್ ಇದ್ದರು.