

ಹೈದರಾಬಾದ್: ಟಾಲಿವುಡ್ನ ಮೆಗಾಪವರ್ಸ್ಟಾರ್ ರಾಮಚರಣ್ ಹಾಗೂ ಕಿಯಾರಾ ಅಡ್ವಾಣಿ ಅಭಿನಯದ ಗೇಮ್ ಚೇಂಜರ್ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ 2021ರಲ್ಲಿ ಆರಂಭವಾಯಿತು. ಇತ್ತೀಚೆಗೆ ಗೇಮ್ ಚೇಂಜರ್ ಸಿನಿಮಾ ಮುಂದಿನ ವರ್ಷ ಅಂದರೆ 2025ಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ತೆಲುಗು ಚಿತ್ರರಂಗದಿಂದ ಕೇಳಿಬರುತಿತ್ತು.
ರಾಮ್ ಚರಣ್ ಅವರ ಕೆಲವು ಭಾಗಗಳನ್ನು ರೀಶೂಟ್ ಮಾಡುವುದರಿಂದ ಹಾಗೂ ಪೋಸ್ಟ್-ಪ್ರೊಡಕ್ಷನ್ಗೆ ಸಮಯದ ಅಗತ್ಯತೆ ಇರುವುದರಿಂದ ಸಿನಿಮಾ ಬಿಡುಗಡೆ ದಿನಾಂಕವೂ ಮುಂದೂಡಿಕೆಯಾಗಿದೆ ಎಂದು ಹೇಳಲಾಗುತಿತ್ತು. ಇದನ್ನು ಕೇಳಿದೆ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೀಗ ಸಿನಿಮಾ ಬಿಡುಗಡೆ ಬಗ್ಗೆ ಗೇಮ್ ಚೇಂಜರ್ ಚಿತ್ರದ ನಿರ್ಮಾಪಕ ದಿಲ್ ರಾಜು ಒಂದು ಕ್ಲಾರಿಟಿ ಕೊಟ್ಟಿದ್ದಾರೆ.
ನಿರ್ಮಾಪಕ ದಿಲ್ ರಾಜು ಅವರು ಗೇಮ್ ಚೇಂಜರ್ನ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷದ ಕ್ರಿಸ್ಮಸ್ ಸಮಯದಲ್ಲಿ ಅದರ ಬಿಡುಗಡೆಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಈ ಚಿತ್ರವು ಶಂಕರ್ ಸರ್ ಮತ್ತು ರಾಮಚರಣ್ ಅವರ ಸಿನಿಮಾಗಳ ಬಗ್ಗೆ ಇರುವ ಚಿತ್ರಣವನ್ನು ಬದಲಾಯಿಸುತ್ತದೆ. ರೋಬೋಟ್ಗಿಂತ ಮೊದಲು ಶಂಕರ್ ಸರ್ ಯಾವ ಶೈಲಿಗೆ ಹೆಸರಾಗಿದ್ದರು ಎಂಬುದಕ್ಕೆ ಇದು ಸರಿಯಾದ ಕಮರ್ಷಿಯಲ್ ಚಿತ್ರ ಆಗಿದೆ. ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಯಾವುದೇ ಡೌಟ್ ಇಲ್ಲ. ಈ ಸಿನಿಮಾ ದೊಡ್ಡ ಯಶಸ್ಸನ್ನು ಪಡೆಯುತ್ತದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.
ಈ ಮೊದಲು ವಿನಯ ವಿಧೇಯ ರಾಮ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ರಾಮ್ಚರಣ್ ಹಾಗೂ ಕಿಯಾರಾ ಅಡ್ವಾಣಿ ಮತ್ತೊಮ್ಮೆ ಕಮಾಲ್ ಮಾಡಲು ಗೇಮ್ ಚೇಂಜರ್ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಡ್ರಾಮಾ ಆಗಿದ್ದು, ಬಹುದೊಡ್ಡ ತಾರಗಣವನ್ನು ಹೊಂದಿದೆ. ದಿಲ್ ರಾಜು ಅವರ ಹೇಳಿಕೆಗಳನ್ನು ಕೇಳಿ ಸಿನಿಮಾ ರಿಲೀಸ್ಗಾಗಿ ಅಭಿಮಾನಿಗಳು ಹೆಚ್ಚು ಉತ್ಸುಕರಾಗಿ ಕಾಯುತ್ತಿದ್ದಾರೆ. ಗೇಮ್ ಚೇಂಜರ್ ಎಷ್ಟರ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್)