

ಕಾಸರಗೋಡು: ವಿಶ್ವ ಕರ್ಮ ದಿನಾಚರಣೆ ಅಂಗವಾಗಿ ಬಿಎಂಎಸ್ ಕಾರಡ್ಕ ಪಂಚಾಯಿತಿ ಕಮಿಟಿ ಆಶ್ರಯದಲ್ಲಿ ಕೇರಳ ಸರ್ಕಾರದ ಜನ ವಿರೋಧಿ ಧೋರಣೆ ಖಂಡಿಸಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು.
ಬಿಎಂಎಸ್ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಕೆ.ರಾಘವನ್ ಸಮಾರಂಭ ಉದ್ಘಾಟಿಸಿದರು. ಜಾಥಾ ಮುಖಂಡ ಅಪ್ಪೋಜಿ ಅವರಿಗೆ ಬಿಎಂಎಸ್ ಧ್ವಜ ಹಸ್ತಾಂತರಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ವಲಯ ಸಮಿತಿ ಅಧ್ಯಕ್ಷ ಆನಂದ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪದಾಧಿಕಾರಿಗಳಾದ ಲೀಲಾ ಕೃಷ್ಣನ್, ಗೀತಾ ಬಾಲಕೃಷ್ಣನ್ ಮೊದಲಾದವರಿದ್ದರು. ವಲಯ ಕಾರ್ಯದರ್ಶಿ ಸದಾಶಿವ ಸ್ವಾಗತಿಸಿದರು. ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ಪ್ರಚಾರ ನಡೆಸಲಾಯಿತು.