

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಾರತದ ಮೊದಲ ಸ್ವಾತಂತ್ರೃ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡ ರಾಣಿ ಅಬ್ಬಕ್ಕ ರಥಯಾತ್ರೆಗೆ ಸುಳ್ಯದಲ್ಲಿ ಸ್ವಾಗತ ನೀಡಲಾಯಿತು.
ಗಾಂಧಿನಗರದಿಂದ ಜ್ಯೋತಿ ವೃತ್ತದ ತನಕ ಸುಳ್ಯ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಸುಳ್ಯ ಗಾಂಧಿನಗರದಿಂದ ಆರಂಭಗೊಂಡ ಪಂಜಿನ ಮೆರವಣಿಗೆಯಲ್ಲಿ ಪ್ರಮುಖರು ಹಾಗೂ ನೂರಾರು ಮಂದಿ ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಜ್ಯೋತಿ ವೃತ್ತದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ದಿಕ್ಸೂಚಿ ಭಾಷಣ ಮಾಡಿ, ರಾಜ್ಯದಲ್ಲಿ ಎರಡು ರಥಯಾತ್ರೆ ಪ್ರಯಾಣ ನಡೆಸುತ್ತಿದ್ದು ಬೆಂಗಳೂರಿನಿಂದ ಹೊರಟ ರಥಯಾತ್ರೆ ಮೈಸೂರು, ಕೊಡಗು, ಸುಳ್ಯದ ಮೂಲಕ ಮಂಗಳೂರಿಗೆ ಆಗಮಿಸಲಿದೆ ಎಂದರು.
ಎಬಿವಿಪಿ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ಪ್ರಾಸ್ತಾವಿಕ ಮಾತನಾಡಿದರು. ಎಬಿವಿಪಿ ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್, ವಿಭಾಗ ಖೇಲೋ ಭಾರತ್ ಸಂಯೋಜಕ ನಂದನ್, ಸುಳ್ಯ ನಗರ ಸಂಯೋಜಕ ಕುಲ್‌ದೀಪ್ ಪೆಲ್ತಡ್ಕ, ಮೈಸೂರು ಮಹಾ ನಗರ ಸಂಘಟನಾ ಕಾರ್ಯದರ್ಶಿ ಮಂದಾರ ಉಪಸ್ಥಿತರಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತಿತರರು ಭಾಗವಹಿಸಿದ್ದರು.