

Raksha Bandhan : ತನ್ನ ಸಹೋದರನಿಗೆ ರಾಖಿ ಕಟ್ಟುವ ಆಸೆಯಿಂದ ಊರಿಗೆ ಬಂದಿದ್ದ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಿನ್ನೆ (ಆಗಸ್ಟ್ 09) ನಡೆದಿದೆ.
ಮೃತ ಯುವತಿಯ ಹೆಸರು ತಲ್ಲಪಲ್ಲಿ ಶ್ರುತಿ. ಈಕೆಗೆ 24 ವರ್ಷ ವಯಸ್ಸಾಗಿತ್ತು. ತನ್ನ ಸಹೋದರನಿಗೆ ರಾಖಿ ಕಟ್ಟಲು ಹೈದರಾಬಾದ್‌ನಿಂದ ಊರಿಗೆ ಬಂದಿದ್ದಳು. ತಮ್ಮ ಮಾವ ಮತ್ತು ತಾಯಿಯ ಜೊತೆ ಕಾರಿನಲ್ಲಿ ಹೋಗುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಆಕೆಯ ತಾಯಿ ಮತ್ತು ಮಾವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಸಿದ್ದಿಪೇಟೆ ಟೌನ್ ಸಿಐ ಉಪೇಂದರ್ ಮಾಹಿತಿ ನೀಡಿದ್ದು, ಚಿನ್ನಕೋಡೂರು ಮಂಡಲದ ಗೋನೆಪಲ್ಲಿ ಗ್ರಾಮದ ನಿವಾಸಿ ತಲ್ಲಪಲ್ಲಿ ಪರಶುರಾಮುಲು ಖಾಸಗಿ ಕಂಪನಿಯ ಉದ್ಯೋಗಿ. ಪ್ರಸ್ತುತ ಸಿದ್ದಿಪೇಟೆಯ ಗಜ್ವೆಲ್ ಪಟ್ಟಣದಲ್ಲಿ ಪತ್ನಿ ಪಲ್ಲವಿ ಮತ್ತು ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅವರ ಮಗಳು ತಲ್ಲಪಲ್ಲಿ ಶ್ರುತಿ (24) ಫಾರ್ಮಸಿಯಲ್ಲಿ ಎಂಎ ಮುಗಿಸಿ ಹೈದರಾಬಾದ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಪರಶುರಾಮುಲು ಅವರ ಪತ್ನಿ ಪಲ್ಲವಿ, ತಮ್ಮ ಪುತ್ರಿ ಶ್ರುತಿ ಜೊತೆ ಗಜ್ವೇಲ್ನಿಂದ ಸಿದ್ದಿಪೇಟೆಗೆ ತಮ್ಮ ಕಿರಿಯ ಸಹೋದರ ನಾಗಿಲ್ಲ ಶ್ರೀನಿವಾಸ್ಗೆ ರಾಖಿ ಕಟ್ಟಲು ಬಂದರು. ಈ ಸಂದರ್ಭದಲ್ಲಿ, ಶ್ರೀನಿವಾಸ್ ಅವರು ತಮ್ಮ ಪತ್ನಿ, ಸಹೋದರಿ ಪಲ್ಲವಿ ಮತ್ತು ಸೊಸೆ ಶ್ರುತಿಯನ್ನು ಕಾರಿನಲ್ಲಿ ಕರೆದುಕೊಂಡು ಅಲ್ಲಿಪುರ ಗ್ರಾಮಕ್ಕೆ ಹೋದರು. ಅಲ್ಲಿ, ತಮ್ಮ ಪತ್ನಿಯನ್ನು ಬಿಟ್ಟರು. ಬಳಿಕ ಶ್ರುತಿ, ತಾಯಿ ಪಲ್ಲವಿ ಮತ್ತು ಮಾವ ಶ್ರೀನಿವಾಸ್ ಜೊತೆ ಮಹಾರಾಷ್ಟ್ರದಿಂದ ಬಂದಿದ್ದ ತನ್ನ ಸಹೋದರ ಲಿಂಗಗೆ ರಾಖಿ ಕಟ್ಟಲು ನಂಗುನೂರ್ ಮಂಡಲದ ನರ್ಮತಾಗೆ ತೆರಳಿದರು.
ಈ ಸಂದರ್ಭದಲ್ಲಿ ಸಿದ್ಧಿಪೇಟೆ ನಗರದ ಹೊರವಲಯವಾದ ರಾಜೀವ್ ರಸ್ತೆಯಲ್ಲಿ ಶ್ರೀನಿವಾಸ್ ಚಲಾಯಿಸುತ್ತಿದ್ದ ಕಾರಿನ ಟೈರ್ ಪಂಕ್ಚರ್ ಆಯಿತು. ಈ ವೇಳೆ ನಿಧಾನವಾಗಿ ರಸ್ತೆ ಬದಿಗೆ ಕಾರು ನಿಲ್ಲಿಸಲು ಪ್ರಯತ್ನಿಸಿದರು. ಅದೇ ಸಮಯದಲ್ಲಿ, ಕರೀಂನಗರದಿಂದ ಸಿಕಂದರಾಬಾದ್‌ಗೆ ಹೋಗುತ್ತಿದ್ದ ಆರ್‌ಟಿಸಿ ರಾಜಧಾನಿ ಬಸ್ ಹಿಂದಿನಿಂದ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶ್ರುತಿಯ ತಲೆಗೆ ಗಂಭೀರ ಗಾಯಗಳಾಗಿದ್ದವು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸಾಗಿಸಿದರು. ಶ್ರುತಿ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀನಿವಾಸ್ ಮತ್ತು ಅವರ ಸಹೋದರಿ ಪಲ್ಲವಿ ಸಣ್ಣಪುಟ್ಟ ಗಾಯಗಳೊಂದಿಗೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್)