

ನವದೆಹಲಿ: ಕಾಶ್ಮೀರ, ಲಡಾಖ್ನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.ಜೂನ್ 15ರಂದು ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದ ನಂತರದ ಈ ಸಂದರ್ಭದಲ್ಲೇ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ರಷ್ಯಾ ಪ್ರವಾಸ ಆರಂಭಿಸಿದ್ದಾರೆ. ಮೂರು ದಿನಗಳ ಪ್ರವಾಸದಲ್ಲಿ ಅವರು ರಷ್ಯಾದ ಸೇನಾ ಉನ್ನತಾಧಿಕಾರಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ.ಹೀಗಾಗಿ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ. ಕರೊನಾ ವೈರಸ್ ಲಾಕ್ಡೌನ್ನ ನಾಲ್ಕು ತಿಂಗಳ ನಂತರದಲ್ಲಿ ಇದೇ ಮೊದಲ ಬಾರಿ ಉನ್ನತ ಸಚಿವರೊಬ್ಬರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದು.
ಲಾಕ್ಡೌನ್ಗೂ ಮೊದಲು ಕೊನೆಯ ವಿದೇಶ ಪ್ರವಾಸ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರದ್ದಾಗಿತ್ತು. ಅವರು ಫೆ.22-24ರ ತನಕ ಜಿ-20 ವಿತ್ತ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಿಯಾಧ್ಗೂ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಫೆ.18-19ರಂದು ಜರ್ಮನಿಗೂ ಭೇಟಿ ನೀಡಿದ್ದರು.
ರಷ್ಯಾ ಪ್ರವಾಸದ ಬಗ್ಗೆ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ಮೂರು ದಿನಗಳ ಮಟ್ಟಿಗೆ ಮಾಸ್ಕೋಗೆ ಹೋಗುತ್ತಿರುವೆ. ಭಾರತ- ರಷ್ಯಾ ನಡುವಿನ ರಕ್ಷಣಾ ಮತ್ತು ವ್ಯೂಹಾತ್ಮಕ ಪಾಲುದಾರಿಕೆ ವಿಚಾರವಾಗಿ ಮಾತುಕತೆ ನಡೆಸುವುದಕ್ಕೆ ರಷ್ಯಾ ಸರ್ಕಾರ ಅವಕಾಶ ಮಾಡಿಕೊಡಲಿದೆ. ಇದೇ ವೇಳೆ ನಾನು ಮಾಸ್ಕೋದ 75ನೇ ವರ್ಷದ ವಿಕ್ಟರಿ ಪರೇಡ್ನಲ್ಲೂ ಭಾಗವಹಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಶೀತಜ್ವರವಿದ್ದ 103 ಜನರಿಗೆ ಕರೊನಾ ಪಾಸಿಟಿವ್
ಅಧಿಕಾರಿಗಳು ಹೇಳುವ ಪ್ರಕಾರ, ರಾಜನಾಥ್ ಸಿಂಗ್ ಅವರು ರಷ್ಯಾ ತೆರಳಿರುವುದಕ್ಕೂ ಚೀನಾ ಜತೆಗಿನ ಸಂಘರ್ಷಕ್ಕೂ ಸಂಬಂಧ ಇಲ್ಲ. ಎರಡು ದೇಶಗಳ ನಡುವಿನ ದಶಕಗಳ ಸೇನಾ ಸಂಬಂಧದ ಕಾರಣಕ್ಕಾಗಿ ಅವರು ಅಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ.
75ನೇ ವರ್ಷದ ವಿಕ್ಟರಿ ಪರೇಡ್ ಎಂದರೆ ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಸೋವಿಯತ್ ರಾಷ್ಟ್ರ ಜರ್ಮನಿ ವಿರುದ್ಧ ಸಾಧಿಸಿದ ಗೆಲುವಿನ ವಿಜಯೋತ್ಸವದ 75ನೇ ವಾರ್ಷಿಕೋತ್ಸವದ ಆಚರಣೆ.ಭಾರತದ ಮೂರು ಸೇನಾಪಡೆಗಳ 75 ಸದಸ್ಯರ ತಂಡ ಈಗಾಗಲೇ ಮಾಸ್ಕೋ ತಲುಪಿದೆ.ಈ ತಂಡವೂ ಚೀನಾ ಸೇರಿದಂತೆ 11 ರಾಷ್ಟ್ರಗಳ ತಂಡಗಳೊಂದಿಗೆ ರಷ್ಯಾದ ವಿಜಯೋತ್ಸವ ಪರೇಡ್ನಲ್ಲಿ ಭಾಗವಹಿಸಲಿದೆ.