ಶೀತಜ್ವರವಿದ್ದ 103 ಜನರಿಗೆ ಕರೊನಾ ಪಾಸಿಟಿವ್

06062020 Koppal Corona Positive Case
Published on

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ 196 ಜನರಲ್ಲಿ ಕರೊನಾ ದೃಢಪಟ್ಟಿದೆ. ಸೋಂಕಿಗೆ ಮೂವರು ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 64ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ 1,272ಕ್ಕೆ ಏರಿಕೆಯಾಗಿದೆ. ಕೆಮ್ಮು, ನೆಗಡಿ, ಶೀತಜ್ವರ ಮಾದರಿಯ 102, ಪ್ರಾಥಮಿಕ ಸಂಪರ್ಕದ 27 ಹಾಗೂ ಸೋಂಕಿನ ಸಂಪರ್ಕ ಪತ್ತೆಯಾದ 67 ಜನರಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದೆ.

ಮಾಹಿತಿ ನೀಡದ ಬಿಬಿಎಂಪಿ ಪ್ರತಿನಿತ್ಯ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸೋಂಕು ಪ್ರಕರಣ ಪತ್ತೆ ಹಚ್ಚುವ ಸಿಬ್ಬಂದಿ ಮತ್ತು ಅಧಿಕಾರಿಗಳು ಚುರುಕಾಗಿ ಸ್ಪಂದಿಸುತ್ತಿಲ್ಲ. ಮೊದಲು ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಿ 24 ಗಂಟೆಯಲ್ಲಿ ಪ್ರಾಥಮಿಕ ಸಂರ್ಪತರು, 48 ಗಂಟೆಯಲ್ಲಿ ದ್ವಿತೀಯ ಸಂರ್ಪತರನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡಿ ಆ ಪ್ರದೇಶ ಕಂಟೇನ್ಮೆಂಟ್ ಮಾಡಲಾಗುತ್ತಿತ್ತು. ಆದರೆ, ಈಗ ಸೋಂಕಿತರ ಬಗ್ಗೆ, ಯಾವ ವಾರ್ಡ್​ಗಳು ಕಂಟೇನ್ಮೆಂಟ್​ಗೆ ಒಳಗಾಗಿವೆ ಎನ್ನುವ ಮಾಹಿತಿ ಬಹಿರಂಗಪಡಿಸುತ್ತಿಲ್ಲ. ಪಾಲಿಕೆಯ ಅಧಿಕೃತ ವೆಬ್​ಸೈಟ್​ನಲ್ಲಿಯೂ ಕರೊನಾ ಕುರಿತ ಮಾಹಿತಿಗಳು ಅಪೂರ್ಣವಾಗಿದ್ದು, ಅಪ್​ಡೇಟ್ ಆಗಿಲ್ಲ.

ಕೇವಲ 17 ಜನರು ಮಾತ್ರ ಸೋಂಕುಮುಕ್ತರಾಗಿ ಬಿಡುಗಡೆ ಯಾಗಿದ್ದಾರೆ. ಆದರೆ, ಯಾವುದೇ ಸೋಂಕಿತರ ನಂಟು, ಪ್ರಯಾಣದ ಇತಿಹಾಸ, ಕಂಟೇ ನ್ಮೆಂಟ್ ವಲಯದ ಸಂಪರ್ಕದಲ್ಲಿರದ ಅನಾ ರೋಗ್ಯದಿಂದ ಆಸ್ಪತ್ರೆಗೆ ದಾಖಲಾದವರಲ್ಲಿಯೇ ಅಧಿಕವಾಗಿ ಸೋಂಕು ದೃಢಪಟ್ಟಿರುವುದು ಆತಂಕ ತಂದೊಡ್ಡಿದೆ. ನಗರದ ಎಲ್ಲ ಮೂಲೆಗಳಲ್ಲಿ ಅನಾರೋಗ್ಯದ ಕಾರಣದಿಂದ ಹೆಚ್ಚಿನ ಪಾಸಿಟಿವ್ ಪ್ರಕರಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಸೋಂಕು ಹರಡಿರುವ ಶಂಕೆ ಮೂಡಿದೆ.

ಶೇ.62 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ: ನಗರದಲ್ಲಿ 796 ಸಕ್ರಿಯ ಪ್ರಕರಣಗಳು (ಶೇ.62.57) ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 411 ಪ್ರಕರಣಗಳಲ್ಲಿ (ಶೇ.32.31) ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೆ ಭಾನುವಾರ 53 ವರ್ಷದ ಮಹಿಳೆ, 62 ವರ್ಷದ ವೃದ್ಧ ಹಾಗೂ 55 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 64ಕ್ಕೆ ಏರಿಕೆಯಾಗಿದ್ದು, ಇದು ರಾಜ್ಯದ ಒಟ್ಟಾರೆ ಸಾವಿನ ಪ್ರಮಾಣದ ಅರ್ಧಕ್ಕಿಂತ ಹೆಚ್ಚಾಗಿದೆ.

ರಾಂಡಂ ಪರೀಕ್ಷೆಗೆ ಅಧಿಕಾರಿಗಳ ಸಿದ್ಧತೆ: ನಗರದ ಮಾರುಕಟ್ಟೆ, ಬಸ್ ನಿಲ್ದಾಣ, ಕೊಳೆಗೇರಿ, ಮಾಲ್, ರೆಸ್ಟೋರೆಂಟ್, ಆಟದ ಮೈದಾನಗಳಲ್ಲಿ ಸಾರ್ವಜನಿಕರಿಗೆ ರಾಂಡಂ ಪರೀಕ್ಷೆ ಮಾಡುವಂತೆ ಬಿಬಿಎಂಪಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು. ಸೋಮವಾರದಿಂದ ಪ್ರತಿದಿನ 7,500 ಜನರನ್ನು ವಿವಿಧೆಡೆ ರ್ಯಾಂಡಂ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ 30 ವಾಹನಗಳು, 31 ಜ್ವರ ತಪಾಸಣಾ ಕೇಂದ್ರ ಹಾಗೂ ಇತರೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net