

ಪುನೀತ್ ರಾಜಕುಮಾರ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ‘ರಾಜಕುಮಾರ’ ಬಿಡುಗಡೆಯಾಗಿ ಮೂರು ವರ್ಷಗಳಾಗಿವೆ. 2017ರ ಮಾರ್ಚ್ 24ರಂದು ಈ ಚಿತ್ರ ರಾಜ್ಯದ್ಯಂತ ಬಿಡುಗಡೆಯಾಗಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆಯುವುದರ ಜತೆಗೆ ಚಿತ್ರ ನೂರು ದಿನ ಯಶಸ್ವಿಯಾಗಿ ಪೂರೈಸಿತ್ತು.
ಹೊಂಬಾಳೆ ಫಿಲಂಸ್‌ನ ವಿಜಯಕುಮಾರ್ ಮತ್ತು ಪುನೀತ್ ರಾಜಕುಮಾರ್ ಕಾಂಬಿನೇಷನ್‌ನ ಎರಡನೆಯ ಚಿತ್ರವೇ ‘ರಾಜ್‌ಕುಮಾರ್’. ಇದಕ್ಕೂ ಮುನ್ನ ಹೊಂಬಾಳೆ ಫಿಲಂಸ್‌ನ ‘ನಿನ್ನಿಂದಲೇ’ ಚಿತ್ರದಲ್ಲಿ ಪುನೀತ್ ನಟಿಸಿದ್ದರು. ಆ ಚಿತ್ರ ಅಷ್ಟಾಗಿ ಯಶಸ್ವಿಯಾಗಿರಲಿಲ್ಲ. ಆ ಸಂದರ್ಭದಲ್ಲಿ ಇನ್ನೊಂದು ಚಿತ್ರವನ್ನು ಜತೆಯಾಗಿ ಮಾಡುವ ಯೋಚನೆಯಲ್ಲಿ ಪುನೀತ್ ಮತ್ತು ವಿಜಯಕುಮಾರ್ ಇದ್ದಾಗ, ಆ ತಂಡವನ್ನು ಸಂತೋಷ್ ಆನಂದರಾಮ್ ಸೇರಿಕೊಂಡರು. ‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಚಿತ್ರ ನಿರ್ದೇಶಿಸಿದ್ದ ಸಂತೋಷ್, ‘ರಾಜ್‌ಕುಮಾರ’ಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದರು.
ಪುನೀತ್ ರಾಜಕುಮಾರ್, ಅನಂತ್ ನಾಗ್, ಪ್ರಕಾಶ್ ರೈ, ಅಶೋಕ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು, ವಿಜಯಲಕ್ಷ್ಮೀ ಸಿಂಗ್, ದತ್ತಣ್ಣ, ಭಾರ್ಗವಿ ನಾರಾಯಣ್, ಚಿಕ್ಕಣ್ಣ ಮುಂತಾದ ಪ್ರತಿಭಾವಂತ ಕಲಾವಿದರು ಜತೆಯಾಗಿ ನಟಿಸಿದ ಈ ಚಿತ್ರವು ತನ್ನ ಕಥೆ ಮತ್ತು ನಿರೂಪಣೆಯಿಂದ ಪ್ರೇಕ್ಷಕರಿಗೆ ಇಷ್ಟವಾಯಿತು. ಇನ್ನು ವಿ. ಹರಿಕೃಷ್ಣ ಸಂಗೀತ ಸಂಯೋಜನೆಯ ‘ಗೊಂಬೆ ಹೇಳುತೈತೆ ...’ ಹಾಡು ಚಿತ್ರದ ಇನ್ನೊಂದು ಪ್ಲಸ್‌ಪಾಯಿಂಟ್ ಆಗಿತ್ತು. ಇದೆಲ್ಲದರಿಂದಾಗಿ ಚಿತ್ರ ದೊಡ್ಡ ಹಿಟ್ ಆಯಿತು. 2017ರ ಬ್ಲಾಕ್‌ಬಸ್ಟರ್ ಎಂದನಿಸಿಕೊಂಡ ಈ ಚಿತ್ರ, ಇವತ್ತಿಗೆ ಬಿಡುಗಡೆಯಾಗಿ ಮೂರು ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿದೆ.
ಈ ಸಂತೋಷವನ್ನು ಹಂಚಿಕೊಂಡಿರುವ ಸಂತೋಷ್ ಆನಂದರಾಮ್, ‘ಮೂರು ವರ್ಷಗಳ ಹಿಂದೆ ಈ ದಿನ ನೀವು ಕೊಟ್ಟ ಹರುಷ ನನ್ನ ಇಡೀ ಜೀವನ ನಾನು ಮರೆಯುವುದಿಲ್ಲ. ‘ರಾಜಕುಮಾರ’ನ ದಾಖಲೆ ಒಂದೆಡೆ ಮತ್ತು ನಿಮ್ಮ ಅಭಿಮಾನ ಪ್ರೀತಿ ಇನ್ನೊಂದು ಕಡೆ. ಕನ್ನಡ ಭಾಷೆಯ ಸಾರ್ವಕಾಲಿಕ ದಾಖಲೆಗಳಲ್ಲಿ ನಮ್ಮ ಸಿನಿಮಾವನ್ನು ಸೇರಿಸಿದ ಕನ್ನಡ ಹೃದಯಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು’ ಎಂದು ಸಂತೋಷ್ ಹೇಳಿಕೊಂಡಿದ್ದಾರೆ.
ಇನ್ನು ಈ ಯಶಸ್ಸಿನ ಹಿನ್ನೆಲೆಯಲ್ಲಿ ಪುನೀತ್, ಸಂತೋಷ್ ಮತ್ತು ವಿಜಯಕುಮಾರ್ ಮೂವರು ‘ಯುವರತ್ನ’ ಚಿತ್ರದಲ್ಲಿ ಮತ್ತೊಮ್ಮೆ ಜತೆಯಾಗಿದ್ದು, ಈ ಚಿತ್ರ ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಮುಗಿದಿರಬೇಕಿತ್ತು. ಆದರೆ, ಕರೊನಾ ವೈರಸ್ ಭೀತಿಯಿಂದಾಗಿ, ಚಿತ್ರೀಕರಣ ಮುಂದಕ್ಕೆ ಹೋಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎರಡು ಹಾಡುಗಳು ಮಾತ್ರ ಬಾಕಿ ಇವೆ. ಕರೊನಾ ಹಾವಳಿ ಕಡಿಮೆಯಾದ ನಂತರ ಆ ಹಾಡುಗಳ ಚಿತ್ರೀಕರಣ ಮುಗಿದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.