ಲವ್ ಮಾಕ್‌ಟೇಲ್ ಯಶಸ್ಸು; ಡಾರ್ಲಿಂಗ್ ಕೃಷ್ಣ ತೆಗೆದುಕೊಂಡ್ರು ಹೊಸ ನಿರ್ಧಾರ!

Love Mocktail 24 MAR 20
Published on

ಬೆಂಗಳೂರು: ಆದಿ ಅಂತಿದ್ದ ಮೇಲೆ ಅಲ್ಲೊಂದು ಅಂತ್ಯ ಸಹಜ. ಆದರೆ ‘ಲವ್ ಮಾಕ್‌ಟೇಲ್’ನ ಆದಿಯದ್ದು ತಾತ್ಕಾಲಿಕ ಅಂತ್ಯ. ಏಕೆಂದರೆ, ಮುಗಿದೇ ಹೋಯಿತು ಎಂಬಂತಿದ್ದ ಆದಿಯ ಪ್ರೇಮಕಥೆ ಮತ್ತೆ ಮುಂದುವರಿದಿದೆ. ಅರ್ಥಾತ್, ಡಾರ್ಲಿಂಗ್ ಕೃಷ್ಣ ಒನ್ ಮ್ಯಾನ್ ಶೋ ರೀತಿಯಲ್ಲಿ ತೆರೆಗೆ ತಂದಿದ್ದ ‘ಲವ್ ಮಾಕ್‌ಟೇಲ್’ ಸಿನಿಮಾದ ಎರಡನೇ ಭಾಗ ಬರಲಿದೆ. ‘ಲವ್ ಮಾಕ್‌ಟೇಲ್ 2’ ಎಂಬ ಶೀರ್ಷಿಕೆಯಲ್ಲೇ ಮೂಡಿಬರಲಿರುವ ಈ ಚಿತ್ರದ ಕಥೆ ಬರೆಯುವ ಪ್ರಕ್ರಿಯೆಗೆ ಕೃಷ್ಣ ಈಗಾಗಲೇ ಚಾಲನೆ ಕೊಟ್ಟಿದ್ದಾರೆ.

‘ಲವ್ ಮಾಕ್‌ಟೇಲ್’ಗೆ ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ-ಸಾಹಸ ಸಂಯೋಜನೆ, ನಿರ್ಮಾಣ, ನಿರ್ದೇಶನ ಮಾಡುವ ಜತೆಗೆ ನಾಯಕ ‘ಆದಿ’ ಆಗಿ ಅಭಿನಯವನ್ನೂ ಮಾಡಿದ್ದ ಡಾರ್ಲಿಂಗ್ ಕೃಷ್ಣ ಇದೀಗ ’ಲವ್ ಮಾಕ್‌ಟೇಲ್ 2’ಗೆ ಕಥೆ ಬರೆಯಲಾರಂಭಿಸಿದ್ದಾರೆ. ಅವರಿಗೆ ‘ಲವ್ ಮಾಕ್‌ಟೇಲ್’ನಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣದಲ್ಲಿ ಕೈಜೋಡಿಸುವ ಜತೆಗೆ ನಾಯಕಿ ‘ನಿಧಿ’ ಆಗಿಯೂ ಅಭಿನಯಿಸಿದ್ದ ಮಿಲನಾ ನಾಗರಾಜ್ ಇಲ್ಲಿಯೂ ಬರವಣಿಗೆಯಲ್ಲಿ ಸಹಕರಿಸಲಿದ್ದಾರೆ.

ಚಿತ್ರದಲ್ಲಿ ಬಹುತೇಕ ಕಲಾವಿದರು-ತಂತ್ರಜ್ಞರು ‘ಲವ್ ಮಾಕ್‌ಟೇಲ್’ನಲ್ಲಿದ್ದವರೇ ಇರಲಿದ್ದಾರೆ. ಇನ್ನು ನಾಯಕ-ನಿರ್ದೇಶಕರಾಗಿ ಕೃಷ್ಣ ಅವರೇ ಮುಂದುವರಿಯಲಿದ್ದಾರೆ. ಹಾಗಾದರೆ ಮಿಲನಾ ನಾಗರಾಜ್ ಇಲ್ಲಿ ತೆರೆ ಮೇಲೆ ಕಾಣಿಸಲಿದ್ದಾರಾ? ಎಂಬ ಪ್ರಶ್ನೆಗೆ ಈಗಲೇ ಯಾವುದೇ ಸ್ಪಷ್ಟತೆ ನೀಡದ ಕೃಷ್ಣ, ಈ ವಿವರಣೆ ನೀಡುತ್ತಾರೆ. ‘ಕಥೆ ಇನ್ನೂ ಆರಂಭಿಕ ಹಂತದಲ್ಲಿದೆ. ಕಥೆ ಹೇಗೆ ಸಾಗುತ್ತೋ ಅದಕ್ಕೆ ತಕ್ಕಂತೆ ಪಾತ್ರ ನಿರ್ಧರಿತವಾಗಿರುತ್ತದೆ. ಮಿಲನಾ ಇಲ್ಲಿ ನಟಿಸುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಆ ಕುರಿತು ನಿಧಾನವಾಗಿ ಮಾಹಿತಿ ಬಹಿರಂಗ ಪಡಿಸಲಾಗುತ್ತದೆ’ ಎನ್ನುತ್ತಾರೆ.

ಅಂದಹಾಗೆ, ‘ಲವ್ ಮಾಕ್‌ಟೇಲ್’ ಮಾಡುವಾಗಲೇ ಸೀಕ್ವೆಲ್ ಮಾಡುವ ಬಗ್ಗೆ ಯೋಚನೆ ಇರಲಿಲ್ಲವಂತೆ. ‘ಇದು ಪೂರ್ವನಿರ್ಧಾರಿತ ಯೋಜನೆ ಅಲ್ಲ. ನಮ್ಮ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ ಪ್ರೋತ್ಸಾಹ, ಅವರ ಪ್ರತಿಕ್ರಿಯೆ ಹಾಗೂ ಯಶಸ್ಸಿನಿಂದಾಗಿ ಹೀಗೆ ಮಾಡಿದರೆ ಹೇಗೆ ಎಂಬ ಒಂದೆಳೆ ಕಥೆ ಹೊಳೆಯಿತು. ಅದನ್ನು ಮಿಲನಾಗೆ ಹೇಳಿದಾಗ ಚೆನ್ನಾಗಿದೆ ಮಾಡೋಣ ಎಂದರು’ ಎನ್ನುತ್ತ ಸೀಕ್ವೆಲ್ ಹಿಂದಿನ ಹಿನ್ನೆಲೆ ವಿವರಿಸಿದರು ಕೃಷ್ಣ.

ಇನ್ನು ಈ ಸಿನಿಮಾ ಯಾವಾಗ ಆರಂಭವಾಗಲಿದೆ ಎಂದು ಈಗಲೇ ಹೇಳುವಂತಿಲ್ಲ. ‘ನಾನು ಆ ಚಿತ್ರಕ್ಕೆ ಬರೀ 15 ದಿನಗಳಲ್ಲಿ ಕಥೆ ಬರೆದಿದ್ದೆ. ಇಲ್ಲಿ ಕಥೆ ಬರೆಯಲು ಎಷ್ಟು ದಿನ ತಗುಲಬಹುದು ಎಂದು ಈಗಲೇ ಹೇಳುವುದು ಕಷ್ಟ. ಒಮ್ಮೆ ಕಥೆ ಮುಗಿದರೆ ಶೂಟಿಂಗ್ ಇತ್ಯಾದಿ ಎಲ್ಲ ಅಷ್ಟೇನೂ ಸಮಯ ತೆಗೆದುಕೊಳ್ಳುವುದಿಲ್ಲ’ ಎನ್ನುತ್ತಾರೆ ಡಾರ್ಲಿಂಗ್.

ಕೋಟ್
‘ಲವ್ ಮಾಕ್‌ಟೇಲ್’ ಮಾಡುವಾಗ ನಮಗೆ ಹೇಗೆ ತೋಚಿತೊ ಹಾಗೆಯೇ ಮಾಡಿದ್ದೆವು. ‘ಲವ್ ಮಾಕ್‌ಟೇಲ್ 2’ ಕೂಡ ನಮಗೆ ಅನಿಸಿದಂತೆಯೇ ಮಾಡೋಣ ಎಂದು ನಾನು ಮಿಲನಾ ನಿರ್ಧರಿಸಿದ್ದೇವೆ.
ಡಾರ್ಲಿಂಗ್ ಕೃಷ್ಣ, ನಟ-ನಿರ್ದೇಶಕ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net