ನಿವೃತ್ತ ಆರ್ವಿು ಆಫೀಸರ್ ಅವತಾರದಲ್ಲಿ ರಾಘಣ್ಣ ಆಗಮನ

raghavendra rajkumar
Published on

ಬೆಂಗಳೂರು: ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ರಾಜತಂತ್ರ ಹೆಣೆಯುತ್ತಿದ್ದಾರೆ. ಸಮಾಜದೊಳಗಿನ ದುಷ್ಟರ ವಿರುದ್ಧ ಸೆಣಸಾಡಲು ಚಾಣಕ್ಯನ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅಂದರೆ, ‘ರಾಜತಂತ್ರ’ ಶೀರ್ಷಿಕೆಯ ಚಿತ್ರವನ್ನು ಒಪ್ಪಿಕೊಂಡಿರುವ ರಾಘಣ್ಣ, ಇನ್ನೇನು ಶೀಘ್ರದಲ್ಲಿ ಮತ್ತೆ ಕ್ಯಾಮರಾ ಮುಂದೆ ಎದುರಾಗಲಿದ್ದಾರೆ. 2004ರಲ್ಲಿನ ‘ಪಕ್ಕದ್ಮನೆ ಹುಡುಗಿ’ ಸಿನಿಮಾ ಬಳಿಕ 14 ವರ್ಷ ಸಿನಿಮಾದಿಂದ ದೂರವಿದ್ದ ರಾಘಣ್ಣ, ಕಳೆದ ವರ್ಷ ‘ಅಮ್ಮನ ಮನೆ’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದರು. ಬಳಿಕ ‘ತ್ರಯಂಬಕಂ’ ಚಿತ್ರದಲ್ಲಿಯೂ ನಟಿಸಿದ್ದರು. ಇದೀಗ ಅವರ ಸಿನಿ ಖಾತೆಗೆ ‘ರಾಜತಂತ್ರ’ ಚಿತ್ರ ಸೇರ್ಪಡೆಗೊಂಡಿದೆ.

‘ತುಂಬ ವಿಶೇಷವಾದ ಪಾತ್ರ. ಇಲ್ಲಿಯವರೆಗೂ ಮಾಡದ ಪಾತ್ರ. ‘ರಾಜತಂತ್ರ’ ಚಿತ್ರದಲ್ಲಿ ನಿವೃತ್ತ ಆರ್ವಿು ಆಫೀಸರ್​ ಆಗಿ ಕಾಣಿಸಿಕೊಳ್ಳಲಿದ್ದೇನೆ. ಗಡಿಯಲ್ಲಿ ದೇಶ ಕಾಯುವ ಆತ, ನಿವೃತ್ತಿ ಹೊಂದಿ ದೇಶದೊಳಕ್ಕೆ ಬಂದಾಗ, ಇಲ್ಲಿನ ಪರಿಸ್ಥಿತಿ ಕಂಡು ಹೇಗೆ ಬದಲಾವಣೆಗೆ ಮುನ್ನುಡಿ ಬರೆಯುತ್ತಾನೆ ಎಂಬುದೇ ಕಥೆ’ ಎನ್ನುತ್ತಾರೆ. ಒಂದಷ್ಟು ರೋಚಕ ಅಂಶಗಳನ್ನಿಟ್ಟು ಕಮರ್ಷಿಯಲ್ ಶೈಲಿಯಲ್ಲಿಯೇ ಸಿನಿಮಾ ಮೂಡಿಬರಲಿದೆ. ಹಿರಿಯ ನಟ ದೊಡ್ಡಣ್ಣ, ನಟಿ ಭವ್ಯಾ ಸೇರಿ ಹಲವು ಕಲಾವಿದರು ಪಾತ್ರವರ್ಗದಲ್ಲಿದ್ದಾರೆ.

ಕ್ಯಾಪ್ಟನ್ ರಾಜಾರಾಮ್ ಹೆಸರಿನ ನಿವೃತ್ತ ಆರ್ವಿು ಅಧಿಕಾರಿಯಾಗಿ ‘ರಾಜತಂತ್ರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಲ್ಲಿ ನಾನು ರಾಜನೂ ಹೌದು, ರಾಮನೂ ಹೌದು. ಸಮಾಜದ ಸುಧಾರಣೆಗೆ ಆತನ ತಂತ್ರಗಾರಿಕೆಯೇ ಈ ಚಿತ್ರದ ಕಥೆ ಎಂದು ರಾಘವೇಂದ್ರ ರಾಜಕುಮಾರ್ ಹೇಳುತ್ತಾರೆ.

ಅಪ್ಪನಿಗೂ, ಶೀರ್ಷಿಕೆಗೂ ಸಂಬಂಧವಿಲ್ಲ: ಚಿತ್ರದ ಶೀರ್ಷಿಕೆ ಬಗ್ಗೆ ಮಾತನಾಡುವ ರಾಘಣ್ಣ, ‘ರಾಜ್ಯ ಆಳುವವನಿಗೆ ರಾಜ ಎನ್ನುತ್ತಾರೆ. ಆತನ ಆಳ್ವಿಕೆ ಹೇಗಿರುತ್ತದೆ ಎಂಬುದೇ ತಂತ್ರಗಾರಿಕೆ. ಶೀರ್ಷಿಕೆಯಲ್ಲಿ ರಾಜ ಇದೇ ಎಂದ ಮಾತ್ರಕ್ಕೆ, ಅಪ್ಪಾಜಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಅವರ ಮಗ ಮಾತ್ರ ಈ ಚಿತ್ರದಲ್ಲಿರಲಿದ್ದಾನೆ. ರಾಜಕೀಯದ ಒಂದಷ್ಟು ಅಂಶಗಳೂ ಈ ಸಿನಿಮಾದಲ್ಲಿ ಕಾಣಿಸಲಿದೆ’ ಎನ್ನುತ್ತಾರವರು.

ಚಾಣಕ್ಯನೇ ಈ ಕಥೆಗೆ ಸ್ಪೂರ್ತಿ: ರಾಜತಂತ್ರ ಎಂಬ ಕಥೆ ಹುಟ್ಟಲು ಮುಖ್ಯಕಾರಣ ಚಾಣಕ್ಯನ ತಂತ್ರಗಾರಿಕೆ. ಆತನನ್ನೇ ಸ್ಪೂರ್ತಿಯಾಗಿಸಿಕೊಂಡು, ಈ ಸಿನಿಮಾ ಕಥೆ ಹೆಣೆಯಲಾಗಿದೆ. ಸಮಾಜದಲ್ಲಿನ ದುಷ್ಟರ ವಿರುದ್ಧ ಬೌದ್ಧಿಕ ಶಕ್ತಿಯನ್ನು ಅಸ್ತ್ರವಾಗಿ ಬಳಸಿಕೊಂಡು, ಚಾಣಕ್ಯನ ನೀತಿಯನ್ನು ಅನುಸರಿಸಿಕೊಂಡು ಹೋರಾಡುವ ಕಥೆ ಈ ಸಿನಿಮಾದ್ದಾಗಿದೆ. ಸೈನಿಕನ ಜತೆಗೆ ರೈತನ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲಲಿದೆ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಪಿವಿಆರ್ ಸ್ವಾಮಿ. ವಿಶ್ವಂ ಡಿಜಿಟಲ್ ಮೀಡಿಯಾ ಸಂಸ್ಥೆ ಚಿತ್ರ ನಿರ್ವಣದ ಹೊಣೆ ಹೊತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net