

Rajat Patidar : ಹೊಸ ನಾಯಕ ರಜತ್ ಪಾಟಿದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ.
ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಮೂರು ಪಂದ್ಯಗಳನ್ನು ಗೆದ್ದಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ. ಆರ್‌ಸಿಬಿ ತನ್ನ ಖಾತೆಯಲ್ಲಿ 6 ಅಂಕಗಳನ್ನು ಹೊಂದಿದ್ದು, ನೆಟ್ ರನ್ ರೇಟ್ +1.015 ಇದೆ. ಮೊದಲ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವಿದ್ದರೆ, ಎರಡನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ತಂಡವಿದೆ.
ಸೋಮವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ವಿರಾಟ್ ಕೊಹ್ಲಿ (42 ಎಸೆತಗಳಲ್ಲಿ 67 ರನ್), ರಜತ್ ಪಾಟಿದಾರ್ (32 ಎಸೆತಗಳಲ್ಲಿ 64 ರನ್) ಮತ್ತು ಜಿತೇಶ್ ಶರ್ಮಾ (19 ಎಸೆತಗಳಲ್ಲಿ ಅಜೇಯ 40 ರನ್) ಅವರ ಕೊಡುಗೆಯಿಂದಾಗಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಮುಂಬೈ ಬೌಲರ್‌ಗಳಲ್ಲಿ ಟ್ರೆಂಟ್ ಬೌಲ್ಟ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ವಿಘ್ನೇಶ್ ಪುತೂರ್ ಒಂದು ವಿಕೆಟ್ ಪಡೆದರು.
ಇದಾದ ನಂತರ, ತಿಲಕ್ ವರ್ಮಾ (56 ರನ್ 29 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಹಾರ್ದಿಕ್ ಪಾಂಡ್ಯ (42 ರನ್ 15 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ ವಿಫಲರಾದರು. ಮುಂಬೈ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 209 ರನ್ ಗಳಿಸಿತು. ಆರ್‌ಸಿಬಿ ಬೌಲರ್‌ಗಳಲ್ಲಿ, ಕೃನಾಲ್ ಪಾಂಡ್ಯ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಯಶ್ ದಯಾಳ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರು.
ಮುಂಬೈ ವಿರುದ್ಧದ ವಿಜಯವನ್ನು ಆಚರಿಸುತ್ತಿದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರಿಗೆ ಬಿಸಿಸಿಐ ಶಾಕ್ ನೀಡಿದೆ. ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಕ್ಕೆ ಕಾರಣ ಮುಂಬೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ನಿಧಾನಗತಿಯ ಓವರ್ ರೇಟ್. ಬೆಂಗಳೂರು ತಂಡ ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾದ ಕಾರಣ ಐಪಿಎಲ್ ಸಂಘಟಕರು ಆರ್‌ಸಿಬಿ ನಾಯಕನಿಗೆ ದಂಡ ವಿಧಿಸಿದರು.
ಈ ಸೀಸನ್ನಲ್ಲಿ ಬೆಂಗಳೂರು ತಂಡದ ಮೊದಲ ನಿಯಮ ಉಲ್ಲಂಘನೆ ಇದಾಗಿರುವುದರಿಂದ ಕೇವಲ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಬಾರಿ ಮುಂಬೈ ಇಂಡಿಯನ್ಸ್, ಲಖನೌ ಸೂಪರ್ಜೈಂಟ್ಸ್ ಸೇರಿದಂತೆ ಅನೇಕ ತಂಡಗಳು ನಿಧಾನಗತಿ ಓವರ್ ರೇಟ್ಗೆ ದಂಡ ತೆತ್ತಿವೆ. (ಏಜೆನ್ಸೀಸ್)