

ಜೈಪುರ: ಪಾಕಿಸ್ತಾನದ ಸೀಮಾ ಹೈದರ್, ಭಾರತದ ಅಂಜು ಫಾತಿಮಾ ತಮ್ಮ ಪ್ರಿಯಕರನಿಗಾಗಿ ದೇಶದ ಗಡಿ ದಾಟಿದ ಪ್ರೇಮಕಥೆಗಳು ಮಾಸುವ ಮುನ್ನವೇ ಇದೀಗ ಅದೇ ರೀತಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಆದರೆ, ಈ ಬಾರಿ ಮಹಿಳೆ ಪ್ರಿಯಕರನಿಗಾಗಿ ಕುವೈತ್ಗೆ ಹಾರಿದ್ದಾರೆ.
ಘಟನೆಯೂ ರಾಜಸ್ಥಾನದ ದುಂಗರ್ಪುರ ಜಿಲ್ಲೆಯಲ್ಲಿ ನಡೆದಿದ್ದು, ದೀಪಿಕಾ ಪಾಟೀದಾರ್(35) ತನ್ನ ಪ್ರಿಯಕರ ಇರ್ಫಾನ್ ಹೈದರ್ಗಾಗಿ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ದೋಚಿ ಪರಾರಿಯಾಗಿದ್ದಾಳೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆ ದೀಪಿಕಾ ಪಾಟೀದಾರ್ಗೆ ಈಗಾಗಲೇ ಮದುವೆಯಾಗಿದ್ದು, 11 ಹಾಗೂ 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆಕೆಯ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಆತ ಪರಿವಾರದೊಂದಿಗೆ ಇರಲಿಲ್ಲ. ತಿಂಗಳಿಗೊಮ್ಮೆ ರಾಜಸ್ಥಾನಕ್ಕೆ ಬರುತ್ತಿದ್ದರು.
ಕುಟುಂಬಸ್ಥರು ಹಾಗೂ ಪತಿಯ ಬಳಿ ಅನಾರೋಗ್ಯದ ಕಾರಣ ನೀಡಿ ಚಿಕಿತ್ಸೆ ಪಡೆಯಲೆಂದು ಮಹಿಳೆ ಹಲವು ಬಾರಿ ರಾಜಸ್ಥಾನದ ಉದಯ್ಪುರ ಹಾಗೂ ಗುಜರಾತ್ಗೆ ಭೇಟಿ ನೀಡುತ್ತಿದ್ದರು. ಅದರಂತೆ ಜುಲೈ 10ರಂದು ಮಹಿಳೆ ಚಿಕತ್ಸೆಗಾಗಿ ಗುಜರಾತ್ಗೆ ತೆರಳುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟ್ಟಿದ್ದಾರೆ. ಜುಲೈ 13ರಂದು ಆಕೆಯ ಪತಿಗೆ ವಾಟ್ಸ್ಅಪ್ ಮೂಲಕ ಕರೆ ಮಾಡಿ ನಿಮ್ಮಿಂದ ಬೇಜಾರಾಗಿದ್ದು, ದೂರ ಹೋಗುತ್ತಿರುವುದಾಗಿ ಹೇಳಿದ್ದಾರೆ.
ದೀಪಿಕಾ ಕರೆ ಬಳಿಕ ಎಚ್ಚೆತ್ತ ಆಕೆಯ ಪತಿ ಹಾಗೂ ಕುಟುಂಬಸ್ಥರು ಮನೆ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಆಕೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪ್ರಿಯಕರನೊಂದಿಗೆ ಓಡಿ ಹೋಗಿರುವುದು ಬೆಳಕಿಗೆ ಬಂದಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಬುರ್ಖಾ ಧರಿಸಿ ಓಡಾಡುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಮಹಿಳೆಯ ಪತಿ ದೂರು ನೀಡಿದ್ದು, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೀಪಿಕಾ ಪತಿ ಮುಕೇಶ್ ಪಾಟೀದಾರ್ ಮಾತನಾಡಿ ಹೈದರ್ ನನ್ನ ಪತ್ನಿಯ ತಲೆ ಕೆಡಿಸಿ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಗುಜರಾತ್ನ ಸಬರ್ಕಾಂತದಲ್ಲಿರುವ ಖೇಡ್ ಬ್ರಹ್ಮದಲ್ಲಿ ಇಬ್ಬರು ಭೇಟಿಯಾಗಿದ್ದು, ಬಳಿಕ ಅಲ್ಲಿಂದ ಕುವೈತ್ಗೆ ಹಾರಿದ್ದಾರೆ ಎಂದು ಮಹಿಳೆಯ ಪತಿ ಮುಕೇಶ್ ಆರೋಪಿಸಿದ್ದಾರೆ.