

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷವೂ ಸಹ ಧ್ವಜಾರೋಹಣ ಮಾಡಲಿದ್ದಾರೆ. ಆದರೆ, ಅದು ಕೆಂಪುಕೋಟೆಯಲ್ಲಿ ಅಲ್ಲ ಬದಲಿಗೆ ಅವರ ಮನೆಯಲ್ಲಿ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಭೇಟಿಯಾಗೋಣ ಎಂದು ವಿಪಕ್ಷಗಳನ್ನು ಉದ್ದೇಶಿಸಿ ನೀಡಿದ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.
2023ರಲ್ಲಿ ಮುಂದಿನ ವರ್ಷ ನಾನೇ ದ್ವಜಾರೋಹಣ ಮಾಡುತ್ತೇನೆ ಎನ್ನುವುದು ದುರಹಂಕಾರದ ಮಾತುಗಳು. ನಿಮ್ಮನ್ನು ಗೆಲ್ಲಿಸಬೇಕೇ ಅಥವಾ ಸೋಲಿಸಬೇಕೇ ಎಂಬುದರ ಕುರಿತು ಜನರು ತೀರ್ಮಾನ ಮಾಡುತ್ತಾರೆ. ಅದನ್ನು ಬಿಟ್ಟು ಚುನಾವಣೆಗೂ ಮುನ್ನ ನೀವೇ ತೀರ್ಮಾನಿಸಿಬಿಟ್ಟರೆ ಹೇಗೆ ಎಂದು ಕಿಡಿಕಾರಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಮ್ಮ ಭಾಷಣದುದ್ದಕ್ಕೂ ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದಿದ್ದಾರೆ. ಮುಂದಿನ ವರ್ಷವೂ ಸಹ ಇಲ್ಲಿ ನಿಂತು ಭಾಷಣ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬದಲಾವಣೆಯ ಭರವಸೆ ನನ್ನನ್ನು ಇಲ್ಲಿಗೆ ಕರೆತಂದಿದೆ. ಮುಂದಿನ ಐದು ವರ್ಷಗಳಲ್ಲಿ ದೇಶ ಅಭೂತಪೂರ್ವ ಅಭಿವೃದ್ಧಿ ಕಾಣಲಿದ್ದು, 2047ರ ವೇಳಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾವನ್ನಾಗಿಸಲು ಇದು ಸುವರ್ಣ ಕ್ಷಣವಾಗಿದೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಬದ್ದನಾಗಿದ್ದೇನೆ.
ಕಳೆದ ಐದು ವರ್ಷಗಳಲ್ಲಿ ನಾನು ಜನತೆಗೆ ನೀಡಿರುವ ಭರವಸೆಗಳು ನನಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಾನು ಭರವಸೆ ನೀಡಿದ ಹಾಗೆ ಸುಧಾರಣೆ ಹಾಗೂ ಕಾರ್ಯಕ್ಷಮತೆ ಮೂಲಕ ಬದಲಾವಣೆ ತರುವುದಾಗಿ ಹೇಳಿದ್ದೆ. ನಾನು ಹೆಮ್ಮೆಯಿಂದ ಕೆಲಸ ಮಾಡಿದ್ದೇನೆ ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.