

ಲಂಡನ್: ಐಪಿಎಲ್ ಟೂರ್ನಿಯ ಫ್ರಾಂಚೈಸಿಗಳು ಈಗಾಗಲೆ ಭಾರತಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ವಿಶ್ವದ ವಿವಿಧೆಡೆ ಟಿ20 ಲೀಗ್ಗಳಲ್ಲಿ ಕೆಲ ತಂಡಗಳ ಮಾಲೀಕತ್ವ ಪಡೆದುಕೊಂಡಿವೆ. ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇಂಗ್ಲೆಂಡ್ನ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವ ಯಾರ್ಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡದ ಒಡೆತನ ಪಡೆದುಕೊಳ್ಳಲು ಮುಂದಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಯಾರ್ಕ್ಶೈರ್ ಕೌಂಟಿ ತಂಡಕ್ಕೆ ರಾಜಸ್ಥಾನ ರಾಯಲ್ಸ್ ಬರೋಬ್ಬರಿ 260 ಕೋಟಿ ರೂ. ಮೊತ್ತದ ಹೂಡಿಕೆಯ ಆರ್ ನೀಡಿದೆ. ಒಂದು ವೇಳೆ ಯಾರ್ಕ್ಶೈರ್ ಈ ಆರ್ ಒಪ್ಪಿಕೊಂಡರೆ, ಇಂಗ್ಲೆಂಡ್ನ ಮೊದಲ ವಿದೇಶಿ ಒಡೆತನದ ಕೌಂಟಿ ಕ್ರಿಕೆಟ್ ತಂಡವೆನಿಸಲಿದೆ.
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಯಾರ್ಕ್ಶೈರ್ನಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡಿದರೆ, ತಂಡದ ಸಂಪೂರ್ಣ ನಿಯಂತ್ರಣವೂ ಅದರದಾಗಲಿದೆ. ಯಾರ್ಕ್ಶೈರ್ ತಂಡ ಸದ್ಯ 155 ಕೋಟಿ ರೂ. (15 ದಶಲಕ್ಷ ಪೌಂಡ್) ಸಾಲದಲ್ಲಿದ್ದು, ಇದರಿಂದ ಹೊರಬರಲು ಹೂಡಿಕೆದಾರರ ನಿರೀಕ್ಷೆಯಲ್ಲಿದೆ. ಸೌದಿ ರಾಜ ರ್ಹಾನ್ ಅಲ್ ಸೌದ್ ಕೂಡ ಯಾರ್ಕ್ಶೈರ್ ಕ್ಲಬ್ ತಂಡವನ್ನು ಖರೀದಿಸಲು ಆಸಕ್ತಿ ತೋರಿದ್ದಾರೆ ಎನ್ನಲಾಗುತ್ತಿದೆ.
160 ವರ್ಷಗಳ ಇತಿಹಾಸ ಹೊಂದಿರುವ ಯಾರ್ಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡ ಪ್ರಸಕ್ತ ಅದರ ಸದಸ್ಯರ ಒಡೆತನದಲ್ಲೇ ಇದೆ. ಇಂಗ್ಲೆಂಡ್ನ 18 ಪ್ರಥಮ ದರ್ಜೆ ಕೌಂಟಿ ತಂಡಗಳ ಪೈಕಿ ಸದ್ಯ 15 ತಂಡಗಳಷ್ಟೇ ಈ ರೀತಿ ಸದಸ್ಯರ ಒಡೆತನದಲ್ಲಿವೆ. ಉಳಿದಂತೆ ಹ್ಯಾಂಪ್ಶೈರ್, ಡರ್ಹ್ಯಾಂ ಮತ್ತು ನಾರ್ಥಂಪ್ಟನ್ಶೈರ್ ತಂಡಗಳಲ್ಲಿ ಈಗಾಗಲೆ ಇಂಗ್ಲೆಂಡ್ನ ಕೆಲ ಉದ್ಯಮಿಗಳು ಹೂಡಿಕೆ ಮಾಡಿ ಒಡೆತನ ಪಡೆದುಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಕೂಡ ಈಗ ಯಾರ್ಕ್ಶೈರ್ ತಂಡದಲ್ಲಿ ಇದೇ ರೀತಿಯ ಒಡೆತನ ಬಯಸಿದೆ. ಈ ಬಗ್ಗೆ ಇದೇ ತಿಂಗಳು ನಡೆಯಲಿರುವ ಯಾರ್ಕ್ಶೈರ್ ಆಡಳಿತ ಮಂಡಳಿಯ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.
ರಾಜಸ್ಥಾನ ರಾಯಲ್ಸ್ ತಂಡ ಯಾರ್ಕ್ಶೈರ್ ಒಡೆತನ ಪಡೆದುಕೊಂಡರೆ, ಇಂಗ್ಲೆಂಡ್ನ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲೂ ತಂಡವೊಂದರ ಒಡೆತನ ಪಡೆದುಕೊಳ್ಳಬಹುದಾಗಿದೆ. ದಿ ಹಂಡ್ರೆಡ್ ಟೂರ್ನಿಯ ನಾರ್ಥರ್ನ್ ಸೂಪರ್ಚಾರ್ಜರ್ಸ್ ತಂಡದಲ್ಲಿ ಯಾರ್ಕ್ಶೈರ್ ಈಗಾಗಲೆ ಬಹುತೇಕ ಷೇರು ಹೊಂದಿದೆ. ಯಾರ್ಕ್ಶೈರ್ ತಂಡದ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣವೇ ಸೂಪರ್ಚಾರ್ಜರ್ಸ್ಗೂ ತವರು ಮೈದಾನವಾಗಿದೆ.