

ಚೆನ್ನೈ: ರಜನಿಕಾಂತ್ ಸದ್ಯದಲ್ಲೇ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಕೋವಿಡ್ನಿಂದ ಅಂತಾರಾಷ್ಟ್ರೀಯ ಫ್ಲೈಟ್ಗಳೆಲ್ಲ ರದ್ದಾಗಿರುವ ಹಿನ್ನೆಲೆಯಲ್ಲಿ ರಜನಿಕಾಂತ್ ಮಾತ್ರ ಹೇಗೆ ಹೋಗುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಬರುವುದು ಸಹಜ. ಈ ವಿಷಯವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಅವರು, ವಿಶೇಷ ಅನುಮತಿ ಪಡೆದುಕೊಂಡಿದ್ದಾರಂತೆ. ಅಷ್ಟೇ ಅಲ್ಲ, ವಿಶೇಷ ಚಾರ್ಟರ್ಡ್ ಫ್ಲೈಟ್ ಮೂಲಕ ಸದ್ಯದಲ್ಲೇ ಪ್ರಯಾಣ ಬೆಳೆಸಲಿದ್ದಾರೆ.
ಇಷ್ಟಕ್ಕೂ ರಜನಿಕಾಂತ್ ತುರ್ತಾಗಿ ಅಮೆರಿಕಾಗೆ ಹೋಗುತ್ತಿರುವುದಕ್ಕೂ ಕಾರಣವಿದೆ. 2016ರಲ್ಲಿ ರಜನಿಕಾಂತ್ ಅವರು ಅಮೆರಿಕಾದಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಈ ಸಂಬಂಧ ತಪಾಸಣೆಗೆ ಅವರು ಅಮೆರಿಕಾಗೆ ಹೋಗಲಿದ್ದಾರಂತೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕೆಲವು ತಿಂಗಳುಗಳ ಹಿಂದೆಯೇ ಅವರು ಚಿಕಿತ್ಸೆಗೆ ಹೋಗಬೇಕಿತ್ತಂತೆ. ಆದರೆ, 'ಅಣ್ಣಾತ್ತೆ' ಚಿತ್ರೀಕರಣ ಇದ್ದುದರಿಂದ ಅದು ಸಾಧ್ಯವಾಗಿಲ್ಲ. ಅದು ಮುಗಿದ ತಕ್ಷಣ, ಕರೊನಾ ಎರಡನೆಯ ಅಲೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಅವರು ಚೆನ್ನೈನಲ್ಲೇ ಇದ್ದರು. ಎರಡನೆಯ ಅಲೆ ಕಡಿಮೆಯಾದ ಮೇಲೆ ಹೋದರಾಯಿತು ಎಂದು ಸುಮ್ಮನಿದ್ದರು. ಈ ಮಧ್ಯೆ, ಅವರ ಆರೋಗ್ಯದಲ್ಲಿ ಕೆಲವು ವ್ಯತ್ಯಾಸಗಳಾದ ಕಾರಣ, ಕೇಂದ್ರ ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಅಮೆರಿಕಾಗೆ ಹೋಗಲಿದ್ದಾರೆ.
ರಜನಿಕಾಂತ್ ಅವರ ಅಳಿಯ ಧನುಶ್ ಸದ್ಯ ಅಮೆರಿಕಾದಲ್ಲಿ ಹಾಲಿವುಡ್ ಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು, ಅವರು ರಜನಿಕಾಂತ್ಗೆ ಜತೆಯಾಗಲಿದ್ದಾರೆ. ಚಿಕಿತ್ಸೆ ಮುಗಿದ ಮೇಲೆ ಮಾವ-ಅಳಿಯ ಇಬ್ಬರೂ ಒಟ್ಟಿಗೆ ಭಾರತಕ್ಕೆ ವಾಪಸ್ಸಾಗುವ ಸಾಧ್ಯತೆ ಇದೆ.