ರಜನಿಕಾಂತ್ - ಶಿವಣ್ಣ ಅಭಿನಯದ 'ಜೈಲರ್​' ಬಿಡುಗಡೆಗೆ ಮುಹೂರ್ತ ಫಿಕ್ಸ್!

Rajanikant and shivarajkumar
Published on

ಚೆನ್ನೈ:ಕಾಲಿವುಡ್​ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ಅಭಿನಯದ ಜೈಲರ್ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಈ ಕುರಿತು ಟ್ವಿಟ್ ಮಾಡಿರುವ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್, ಸಿನಿಮಾ ಕುರಿತಾದ ಮಾಹಿತಿಯನ್ನು ನೀಡುವುದರ ಜೊತೆಗೆ 47 ಸೆಕೆಂಡುಗಳ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್ 10ರಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳಿಗೆ ರಸದೌತಣ ನೀಡುವ ನಿರೀಕ್ಷೆಯಿದೆ. ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಉತ್ತಮ ರೆಸ್ಪಾನ್ಸ್ ಬಂದಿದ್ದು, ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿದೆ.

47 ಸೆಕೆಂಡುಗಳ ವಿಡಿಯೋದಲ್ಲಿ ನೀಲಿ ಬಣ್ಣದ ಅಂಗಿ ಹಾಗೂ ಕಂದು ಬಣ್ಣದ ಪ್ಯಾಂಟ್ ತೊಟ್ಟು ರಜನಿ ತಮ್ಮದೇ ಶೈಲಿಯಲ್ಲಿ ಕಾರಿನಿಂದ ಇಳಿಯುವ ದೃಶ್ಯ ಅಭಿಮಾನಿಗಳನ್ನು ಬೆರಗಾಗಿಸಿದೆ. ಬಹುತಾರಾಗಣದ ಚಿತ್ರವಾಗಿರುವ ಜೈಲರ್ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್, ಮಲಯಾಳಂ ನಟ ಮೋಹನ್ ಬಾಬು, ಬಾಲಿವುಡ್ ನಟ ಜಾಕಿಶ್ರಾಫ್ ನಟಿಸಿದ್ದಾರೆ. ಮಿಲ್ಕಿ ಬ್ಯುಟಿ ತಮನ್ನಾ ಭಾಟಿಯಾ ರಜನಿಗೆ ನಾಯಕಿಯಾಗಿ ಸಾಥ್ ನೀಡಲಿದ್ದು, ರಮ್ಯಾಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ರಜನಿ ಅಭಿನಯದ 169 ನೇ ಚಿತ್ರವಾಗಿರುವ ಜೈಲರ್ ಬಹುನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಚಿತ್ರವನ್ನು ಕಲಾಮಾರನ್ ಭಾರಿ ಬಜೆಟ್ ನಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ. ಇನ್ನು ಚಿತ್ರವನ್ನು ಬೀಸ್ಟ್ ಸಿನಿಮಾ ಖ್ಯಾತಿಯ ನೆಲ್ಸನ್ ದಿಲೀಪ್ ಚಿತ್ರವನ್ನು ನಿರ್ದೇಶನ ಮಾಡಿದರೆ, ಚಿತ್ರಕ್ಕೆ ಸ್ಟಾರ್ ಸಂಗೀತ ನಿರ್ದೇಶಕರಾಗಿರುವ ಅನಿರುಧ್ ರವಿಚಂದರ್ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಈ ಹಿಂದೆ 2021ರಲ್ಲಿ ಬಿಡುಗಡೆಯಾಗಿದ್ದ ಅನ್ನಾತೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.(ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net