

Charge Sheet: ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಮದ್ಯಪ್ರದೇಶದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ 790 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಮೃತ ರಘುವಂಶಿ ಪತ್ನಿ ಸೋನಮ್, ಆಕೆಯ ಪ್ರಿಯಕರ ರಾಜ್ ಕುಶ್ವಾಹ ಪ್ರಕರಣ ಪ್ರಮುಖ ಆರೋಪಿಗಳಾಗಿದ್ದು, ಕೊಲೆಗಾರರಾದ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಮ್ ಮತ್ತು ಕುಶ್ವಾಹ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶ ಅಥವಾ ಸುಳ್ಳು ಮಾಹಿತಿ ನೀಡುವುದಕ್ಕೆ ಸಂಬಂಧಿಸಿದ ಆರೋಪ ಸಾಬೀತಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1), 238(a) ಮತ್ತು 61(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲೋಕೇಂದ್ರ ತೋಮರ್, ಬಲ್ಲಾ ಅಹಿರ್ವಾರ್ ಹಾಗೂ ಸಿಲೋಮ್ ಜೇಮ್ಸ್ ಎಂಬ ಮೂವರು ಮೇಲೆ ಸಾಕ್ಷ್ಯ ನಾಶಪಡಿಸಿದ ಆರೋಪವನ್ನು ಹೊರಿಸಲಾಗಿದೆ.
ಈ ಕುರಿತು ಮಾತನಾಡಿರುವ ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಮ್, ಸೋನಮ್ ಕುಶ್ವಾಹ ಜೊತೆ ಸಂಬಂಧ ಹೊಂದಿದ್ದಳು. ಪ್ರಿಯಕರನ ಜೊತೆ ಸೇರಿ ಮೂವರು ಕೊಲೆಗಾರರೊಂದಿಗೆ ಸೊಹ್ರಾ (ಚಿರಾಪುಂಜಿ) ಗೆ ಹನಿಮೂನ್ ಪ್ರವಾಸದ ಸಮಯದಲ್ಲಿ ತನ್ನ ಗಂಡ ರಘುವಂಶಿಯನ್ನುಕೊಲ್ಲಲು ಸಂಚು ರೂಪಿಸಿದ್ದಳು. ಅದರಂತೆ ಕೊಲೆ ನಡೆದಿದ್ದು, ಸೋನಮ್, ಕುಶ್ವಾಹ ಮತ್ತು ಹಂತಕರು ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ರಘುವಂಶಿ ಮತ್ತು ಸೋನಮ್ ಮೇ 22 ರಂದು ಮೇಘಾಲಯಕ್ಕೆ ಆಗಮಿಸಿದ್ದರು. ಶಿಲ್ಲಾಂಗ್‌ನಲ್ಲಿ ಬಾಡಿಗೆಗೆ ಪಡೆದ ಸ್ಕೂಟರ್‌ನಲ್ಲಿ ಸೊಹ್ರಾಗೆ ತೆರಳಿದ ಮರುದಿನ ಅವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಜೂನ್ 2 ರಂದು, ಪೊಲೀಸರು ಸೊಹ್ರಾದ ವೈಸಾವ್ಡಾಂಗ್ ಜಲಪಾತದ ಬಳಿಯ ಆಳವಾದ ಕಂದಕದಿಂದ ರಘುವಂಶಿಯ ಶವವನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ನಂತರ, ಕೊಲೆಗೆ ಬಳಸಲಾದ ಎರಡು ಮಚ್ಚುಗಳನ್ನು ವಶಪಡಿಸಿಕೊಂಡಿದ್ದರು.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ರಘುವಂಶಿಯವರ ತಲೆಯ ಮೇಲೆ ಎರಡು ಗಾಯದ ಗುರುತುಗಳು ಕಂಡುಬಂದಿವೆ. ಮೃತದೇಹ ಪತ್ತೆಯಾದ ನಂತರ, ಮೇಘಾಲಯ ಸರ್ಕಾರವು ವಿಶೇಷ ತನಿಖಾ ತಂಡ (SIT)ವನ್ನು ರಚಿಸಿತ್ತು. (ಏಜೆನ್ಸೀಸ್)