

| ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಟೋಬಿ
ನಿರ್ದೇಶನ: ಬಾಸಿಲ್
ನಿರ್ಮಾಣ: ಶನಿಲ್ ಬಂಗೇರಾ
ತಾರಾಗಣ: ರಾಜ್ ಬಿ. ಶೆಟ್ಟಿ, ಚೈತ್ರಾ ಜೆ. ಆಚಾರ್, ಸಂಯುಕ್ತಾ ಹೊರನಾಡು, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ಶೆಟ್ಟಿ, ಯೋಗಿ ಬಂಕೇಶ್ವರ್, ಭರತ್ ಜಿಬಿ, ಸಂಧ್ಯಾ ಅರಕೆರೆ ಮುಂತಾದವರು.
ರಾಷ್ಟ್ರಮಟ್ಟದ ಕಥಾಸ್ಪರ್ಧೆಯಲ್ಲಿ 3.73 ಲಕ್ಷಕ್ಕೂ ಅಧಿಕ ಕಥೆಗಳ ಪೈಕಿ ಟಿ.ಕೆ.ದಯಾನಂದ್ ಬರೆದಿದ್ದ "ಟೋಬಿ' ಕಥೆ ಗೆದ್ದಿತ್ತು. ಆ ಪಾತ್ರದ ಸುತ್ತ ತಮ್ಮದೇ ರೀತಿಯಲ್ಲಿ ಕಥೆ ಮಾಡಿಕೊಂಡಿದ್ದರು ನಟ ರಾಜ್ ಬಿ. ಶೆಟ್ಟಿ. ಇಬ್ಬರೂ "ಕಥೆಯಲ್ಲಿ ಅತಿ ಹೆಚ್ಚು ಡಿಸ್ಟರ್ಬ್ ಆದ, ಸುತ್ತಮುತ್ತಲಿನ ಇತರೆ ಪಾತ್ರಗಳನ್ನೂ ಡಿಸ್ಟರ್ಬ್ ಮಾಡುವ ಜತೆಗೆ ನೋಡುವ ಪ್ರೇಕ್ಷಕರನ್ನೂ ಕಾಡುವಂತಹ ಪಾತ್ರವಿದು' ಎಂದು ಹೇಳಿಕೊಂಡಿದ್ದರು. "ಟೋಬಿ' ಸಿನಿಮಾ ನೋಡಿದ ಬಳಿಕ ಆ ಮಾತು ಅಕ್ಷರಶಃ ಸತ್ಯ ಎಂಬುದು ತಿಳಿಯುತ್ತದೆ.
ಅನಾಥಾಶ್ರಮದಲ್ಲಿ ಹೆಸರಿಲ್ಲದೇ ಬೆಳೆಯುತ್ತಿದ್ದ ಮೂಕ ಬಾಲಕನಿಗೆ, ಚರ್ಚ್ ಫಾದರ್ ಇಗ್ಲೇಷಿಯಸ್ (ಯೋಗಿ) ಇಡುವ ಹೆಸರು ಟೋಬಿ (ರಾಜ್). ಟೋಬಿಯೋ ಒಮ್ಮೆ ಒಬ್ಬರನ್ನು ನಂಬಿದರೆ ಮುಗಿಯಿತು. ಅವರು ಹೇಳಿದ್ದೇ ವೇದವಾಕ್ಯ. ಅದನ್ನೇ ಬಂಡವಾಳ ಮಾಡಿಕೊಳ್ಳುವ ಆನಂದ (ದೀಪಕ್), ಟೋಬಿಯಿಂದ ಮಾಡಬಾರದ ಕೆಲಸಗಳನ್ನು ಮಾಡಿಸುತ್ತಾನೆ. ಶವಾಗಾರದಲ್ಲಿ ಕೆಲಸ ಮಾಡುವ ಟೋಬಿಗೆ ಬದುಕಿರುವವರನ್ನು ಶವಾಗಾರಕ್ಕೆ ಕಳುಹಿಸುವುದು ದೊಡ್ಡ ವಿಷಯವಲ್ಲ. ಆತನನ್ನು ದಾರಿಗೆ ತರಬೇಕು ಅಂತ ಮಗಳು ಜೆನ್ನಿ (ಚೈತ್ರಾ) ಪ್ರಯತ್ನಿಸುತ್ತಿರುತ್ತಾಳೆ. ಆಗ ನಡೆಯುವ ಒಂದು ಟನೆ ಟೋಬಿಯನ್ನು ಬದಲಿಸುತ್ತದೆ. ಇನ್ನೇನು ದಾರಿಗೆ ಬಂದ ಎನ್ನುವಷ್ಟರಲ್ಲಿ ಆತ ನಾಪತ್ತೆಯಾಗುತ್ತಾನೆ. ಹಾಗಾದರೆ ಟೋಬಿ ಎಲ್ಲಿಗೆ ಹೋದ? ಏನಾದ? ಆತ ಬದಲಾಗುತ್ತಾನಾ? ಮುಂದೇನು? ಎಂಬುದೇ ಸಿನಿಮಾ.
"ಟೋಬಿ' ಪಾತ್ರವೇ ಅತ್ಯಂತ ವಿಲಕ್ಷಣ, ವಿಕೃತ, ಕ್ರೂರಿ. ತನ್ನನ್ನು ದ್ವೇಷಿಸುವವರನ್ನು ಮಾತ್ರವಲ್ಲ ಜತೆಗಿರುವವರನ್ನೂ ಡಿಸ್ಟರ್ಬ್ ಮಾಡುವಂತಹ ವ್ಯಕ್ತಿ. ಕಥೆ ಸಾಗಿದಂತೆ ಪ್ರೇಕ್ಷಕರೂ ಆತನೊಂದಿಗೆ ನಗುತ್ತಾರೆ, ಅಳುತ್ತಾರೆ, ಅವನನ್ನು ಕಂಡು ಮರುಕಡುತ್ತಾರೆ, ಆತನನ್ನು ಹಿಡಿದು ಬಡಿಯಬೇಕು ಎಂದು ಕೋಪಿಸಿಕೊಳ್ಳುತ್ತಾರೆ. ಹೀಗೆ ಎಲ್ಲ ಭಾವನೆಗಳನ್ನೂ ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ. ಅಂತಹ ಒಂದು ಅತ್ಯಂತ ಗೊಂದಲಮಯ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ಮಿಂಚಿದ್ದಾರೆ. ಅವರನ್ನು "ಟೋಬಿ'ಯಾಗಿ ನೋಡುವುದೇ ಹಬ್ಬ. ಚೈತ್ರಾ ಜೆ. ಆಚಾರ್ ಮತ್ತು ರಾಜ್ ನಡುವಿನ ಜುಗಲ್ಬಂದಿ ಚಿತ್ರದ ಹೈಲೈಟ್ಗಳಲ್ಲೊಂದು. ಟೋಬಿಯ ಎಲ್ಲ ದುಃಖಗಳಿಗೂ ಮೂಲವಾದ ಆನಂದನ ಪಾತ್ರದಲ್ಲಿ ದೀಪಕ್, ಶವಾಗಾರದಲ್ಲಿ ಕೆಲಸ ಮಾಡುವ ದಾಮೋದರನಾಗಿ ಗೋಪಾಲಕೃಷ್ಣ ದೇಶಪಾಂಡೆ ನೈಜ ಅಭಿನಯ, ಸಾವಿತ್ರಿ ಎಂಬ ಸವಾಲಿನ ಪಾತ್ರದಲ್ಲಿ ಸಂಯುಕ್ತಾ ಹೊರನಾಡು… ಹೀಗೆ ಎಲ್ಲರ ಅಭಿನಯ ಸಿನಿಮಾವನ್ನು ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ.
ಬಾಸಿಲ್ ಚೊಚ್ಚಲ ನಿರ್ದೇಶನದಲ್ಲಿಯೇ ಸವಾಲಿನ ಕಥೆ ಹೆಕ್ಕಿ, ಉತ್ತಮ ಕಲಾವಿದರನ್ನು ಸೇರಿಸಿ, ಒಂದೊಳ್ಳೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಪ್ರವಿಣ್ ಶ್ರಿಯಾನ್ ಛಾಯಾಗ್ರಹಣದಲ್ಲಿ ಮಿಂಚಿದ್ದಾರೆ. ಆದರೆ, 155 ನಿಮಿಷಗಳ ಚಿತ್ರವಾಗಿದ್ದು, ಮೊದರ್ಲಧದಲ್ಲಿ ಕೊಂಚ ಕತ್ತರಿ ಪ್ರಯೋಗ ಆಗಬೇಕಿತ್ತು ಅಂತನ್ನಿಸಬಹುದು. ಮಿಥುನ್ ಮುಕುಂದನ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಇತ್ತೀಚಿನ ದಿನಗಳಲ್ಲಿ ನೋಡುವ ಸಿನಿಮಾಗಳು ಹೆಚ್ಚಾಗಿ ಬಂದಿವೆ. ಅವುಗಳ ನಡುವೆ "ಟೋಬಿ' ಹಲವು ದಿನಗಳ ಕಾಲ ಕಾಡುವ ಸಿನಿಮಾ…!