ಸಂಯುಕ್ತಾ ತ್ರಿಬಲ್ ಸಂಭ್ರಮ; ವರಮಹಾಲಕ್ಷ್ಮೀ ಹಬ್ಬದಂದು ಎರಡು ಸಿನಿಮಾಗಳು ರಿಲೀಸ್

samyuktha
Published on

ಹಬ್ಬವೆಂದರೇ ಸಂಭ್ರಮ. ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರಿಯವಾದ ವರಮಹಾಲಕ್ಷ್ಮೀ ಅಂದರೆ ಸಡಗರ ಸ್ವಲ್ಪ ಹೆಚ್ಚೇ. ನಟಿಯರೂ ಅದರಿಂದ ಹೊರತಾಗಿಲ್ಲ. ಆದರೆ ನಟಿ ಸಂಯುಕ್ತಾ ಹೊರನಾಡುಗೆ ಈ ಬಾರಿಯ ಹಬ್ಬ ತ್ರಿಬಲ್ ಸಂಭ್ರಮ ನೀಡಿದೆ. ಹಬ್ಬದ ಖುಷಿ ಜತೆಗೆ ಅವರು ನಟಿಸಿರುವ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ.

ವರಮಹಾಲಕ್ಷ್ಮೀ ಸಡಗರ:
ಮಹಿಳೆಯರಿಗೆ ಹೆಚ್ಚು ಸಂತಸ ನೀಡುವ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಬಗ್ಗೆ ಸಂಯುಕ್ತಾ, ‘ಲಕ್ಷ್ಮೀ ಎಂದರೆ ಹಣ, ಸಂಪತ್ತು ಮಾತ್ರವಲ್ಲ. ದೇವಿಯ ಪೂಜೆ ಮಾಡಿದಾಗ ನಮ್ಮೊಳಗೆ ಒಂದು ಶಕ್ತಿ, ಧೈರ್ಯ ಜಾಗೃತವಾಗುತ್ತದೆ. ಆಕೆಯ ಕರುಣೆ ನೆಮ್ಮದಿಯನ್ನು ನೀಡುತ್ತದೆ. ನನ್ನ ಜೀವನದಲ್ಲಿ ತಾಯಿ ಹಾಗೂ ಅಜ್ಜಿ ಸ್ಫೂರ್ತಿ. ಹೀಗಾಗಿ ದೇವಿಯನ್ನು ಪೂಜಿಸುವುದು ನನಗೆ ಖುಷಿ’ ಎನ್ನುತ್ತಾರೆ

ಎರಡೆರಡು ಸಿನಿ ಸಂಭ್ರಮ:
ವರಮಹಾಲಕ್ಷ್ಮೀ ಹಬ್ಬದ ದಿನವೇ ಎರಡು ಸಿನಿಮಾಗಳ ಬಿಡುಗಡೆಯ ಖುಷಿಯಲ್ಲಿರುವ ಸಂಯುಕ್ತಾ, ‘ಈ ವರ್ಷ ನನ್ನ ‘ಟೋಬಿ’ ಮತ್ತು ‘ಬಯಲುಸೀಮೆ’ ಸಿನಿಮಾಗಳು ಹಬ್ಬದ ದಿನ ಬಿಡುಗಡೆಯಾಗುತ್ತಿರುವುದು ಹೆಚ್ಚು ಖುಷಿ. ಎರಡೂ ಸಿನಿಮಾಗಳಿಗೆ ಒಳ್ಳೆಯದಾಗಬೇಕು ಎನ್ನುವುದೇ ನನ್ನ ಪ್ರಾರ್ಥನೆ’ ಎಂದು ಹೇಳುತ್ತಾರೆ.

‘ಟೋಬಿ’ ತುಂಬಿದ ಶಕ್ತಿ:
‘ಟೋಬಿ’ ಸಿನಿಮಾದಿಂದ ಸಂಯುಕ್ತಾ ಅವರ ಆತ್ಮಸ್ಥೈರ್ಯ ಹೆಚ್ಚಿದೆಯಂತೆ. ಬಾಸಿಲ್ ನಿರ್ದೇಶನದ, ರಾಜ್.ಬಿ.ಶೆಟ್ಟಿ ಅಭಿನಯದ ಸಿನಿಮಾದಲ್ಲಿ ನಟಿಸಿದ ಬಗ್ಗೆ, ‘ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಕೆಲವೊಮ್ಮೆ ಮಾಡಿದ್ದನ್ನೇ ಮಾಡುತ್ತಿದ್ದೇವೆ ಎನ್ನುವ ಏಕತಾನತೆ ಮೂಡುವುದು ಸಹಜ. ಹೀಗಿದ್ದಾಗ ಸವಾಲನ್ನು ಹಾಕಿ ನನ್ನೊಳಗೆ ಹೊಸ ಶಕ್ತಿ ನೀಡಿದ ಸಿನಿಮಾ ಇದು. ಅಷ್ಟೇ ಗಟಿಯಾದ ಪಾತ್ರ ನನ್ನದು. ಹೆಚ್ಚು ಸಿನಿಮಾಗಳನ್ನು ಮಾಡಬೇಕು, ಚಿತ್ರರಂಗದಲ್ಲಿ ಉಳಿಯಬೇಕು ಎನ್ನುವ ಆತ್ಮವಿಶ್ವಾಸ ಕೊಟ್ಟಿದೆ. ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿದರೆ ಲಕ್ಷ್ಮೀ ಒಲಿಯುತ್ತಾಳೆ ಎನ್ನುವುದಕ್ಕೆ ಸಾಕ್ಷಿ ಇದು. ಕಳೆದ ಕೆಲವು ತಿಂಗಳಿಂದ ಲಕ್ಷ್ಮೀ ಕೃಪೆ ಕನ್ನಡ ಚಿತ್ರರಂಗದ ಮೇಲೆ ಇರುವುದನ್ನು ಕಾಣಬಹುದು’ ಎನ್ನುತ್ತಾರೆ ಸಂಯುಕ್ತಾ. ಜತೆಗೆ ಅಭಿಮಾನಿಗಳ ಜತೆ ಕುಳಿತು ‘ಟೋಬಿ’ ಸಿನಿಮಾ ನೋಡುವ ಮೂಲಕ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದಾರಂತೆ ಸಂಯುಕ್ತಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net