

ಬೆಂಗಳೂರು: ಕೇರಳ, ಮಹಾರಾಷ್ಟ್ರಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಗೂ ಗಡಿಭಾಗದ ಜಿಲ್ಲೆಗಳಲ್ಲೂ ಸೋಂಕು ಏರಿರುವುದರಿಂದ ಗಂಭೀರವಾಗಿ ಪರಿಗಣಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಶೇಷವಾಗಿ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ಅವರು, ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆಕ್ಸಿಜನ್ ಪೂರೈಕೆ, ಔಷಧಿ ಲಭ್ಯತೆ, ಮುನ್ನೆಚ್ಚರಿಕೆ ಕ್ರಮಗಳು, ಗಡಿ ಭಾಗಗಳಲ್ಲಿ ತಪಾಸಣೆ ಮೊದಲಾದ ವಿಷಯಗಳ ಕುರಿತು ವಿವರವಾಗಿ ಚರ್ಚೆ ನಡೆಸಿದರು. ಬಳಿಕ ಕೆಲವೊಂದು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.