28ರಿಂದ ರಾಜ್ಯದಲ್ಲಿ ಮತ್ತೆ ಮಳೆ: ಮಾನ್ಸೂನ್ ಪ್ರವೇಶಿಸಿ 3 ತಿಂಗಳಾಯ್ತು

rain (4)
Published on

ಬೆಂಗಳೂರು: ಕೆಲ ದಿನಗಳಿಂದ ರಾಜ್ಯದಲ್ಲಿ ಕ್ಷೀಣವಾಗಿದ್ದ ಮಳೆ, ಆ.28ರಿಂದ ಮತ್ತೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಉಡುಪಿ,ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಆ.28ರಿಂದ ಆ.30ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ 115 ಮಿಮೀ ವರೆಗೆ ಸುರಿಯಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಬೀದರ್‌ನಲ್ಲಿ ಆ.28 ರಿಂದ ಮುಂದಿನ 2 ದಿನ ಹಾಗೂ ಕೊಡಗು, ಬೆಳಗಾವಿಯಲ್ಲಿ ಆ.29ರಂದು ಬಿರುಸಾಗಿ ಸುರಿಯುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಯಾದಗಿರಿಯಲ್ಲಿ ಆ.28ರಂದು ಯೆಲ್ಲೋ ಅಲರ್ಟ್ ಇರಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡದಲ್ಲಿ ಮುಂದಿನ 6 ದಿನ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಒಣಹವೆ ಕಾಣಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಕೆಲ ಆಯ್ದ ಭಾಗಗಳಲ್ಲಿ ಸಾಧಾರಣ ಮಳೆ ಬೀಳಲಿದೆ.

3 ತಿಂಗಳಾಯ್ತು: ರಾಜ್ಯದಲ್ಲಿ ಮಾನ್ಸೂನ್ ಪ್ರವೇಶಿಸಿ 3 ತಿಂಗಳಾಗಿದ್ದು, ಸೆ.30ಕ್ಕೆ ಕೊನೆಗೊಳ್ಳಲಿದೆ. ಜೂ.1ರಿಂದ ಆ. 24ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 654 ಮಿಮೀ ಮಳೆಯಾಗಬೇಕಿತ್ತು. ಆದರೆ, 662 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.1 ಗಿಂತ ಅಧಿಕವಾಗಿ ಸುರಿದಿದೆ. ಕರಾವಳಿ ವ್ಯಾಪ್ತಿಯಲ್ಲಿ 2,626 ಮಿಮೀ, ಮಲೆನಾಡಿನ ಜಿಲ್ಲೆಗಳಲ್ಲಿ 1,186 ಮಿಮೀ, ಉತ್ತರ ಕರ್ನಾಟದ ಭಾಗಗಳಲ್ಲಿ 364 ಮಿಮೀ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 241 ಮಿಮೀ ಮಳೆ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net