

ಉಪ್ಪಿನಂಗಡಿ: ನೆಲ್ಯಾಡಿ ಪೇಟೆಯಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನೆಲ್ಯಾಡಿ ಪೇಟೆಯಲ್ಲಿ ಅಪೂರ್ಣ ಹಂತದಲ್ಲಿದ್ದು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಪ್ರವಾಹದಂತೆ ರಸ್ತೆಯಲ್ಲೇ ಹರಿದು ತಗ್ಗುಪ್ರದೇಶಗಳಿಗೆ ನುಗ್ಗಿದೆ.
ನೆಲ್ಯಾಡಿ ಭಾಗದಲ್ಲಿ ಸಂಜೆ ಸುಮಾರು 2 ತಾಸು ಭಾರಿ ಮಳೆಯಾಗಿದೆ. ಸರ್ವೀಸ್ ರಸ್ತೆಯಲ್ಲಿ 1 ಅಡಿಗೂ ಹೆಚ್ಚು ನೀರು ನಿಂತಿತ್ತು. ಅಂಡರ್ಪಾಸ್ನಲ್ಲೂ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರು, ಪಾದಚಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ನೆಲ್ಯಾಡಿ ಪೇಟೆಯಲ್ಲಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ನಿಂತಿದ್ದು ಮೇಲ್ಸೇತುವೆಯಿಂದ ಧಾರಕಾರ ಮಳೆ ನೀರು ಸರ್ವೀಸ್ ರಸ್ತೆಗೆ ಹರಿದು ಬಂದಿದೆ. ಎರಡೂ ಬದಿಯ ಸರ್ವೀಸ್ ರಸ್ತೆಯ ಪಕ್ಕದಲ್ಲೇ ಚರಂಡಿ ವ್ಯವಸ್ಥೆ ಮಾಡಲಾಗಿದ್ದರೂ ಸರ್ವೀಸ್ ರಸ್ತೆಗಿಂತ ಕಾಂಕ್ರೀಟ್ ಚರಂಡಿ ಎತ್ತರವಾಗಿರುವುದರಿಂದ ನೀರು ಹರಿದು ಹೋಗುತ್ತಿಲ್ಲ. ಸರ್ವೀಸ್ ರಸ್ತೆಯಲ್ಲಿ ಸುಮಾರು 1 ಅಡಿಗೂ ಹೆಚ್ಚು ನೀರು ನಿಂತಿತ್ತು.