

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಾಳ್ತಿಲ ಗ್ರಾಮದ ಕಂಟಿಕ ಶಾಲಾ ವ್ಯಾಪ್ತಿಯ ನಾಗರಿಕರಿಗೆ ಶನಿವಾರ ಹಬ್ಬದ ವಾತಾವರಣ. 40 ವರ್ಷಗಳ ಬಳಿಕ ತಮ್ಮ ಊರಿನ ಶಾಲೆಯಲ್ಲಿ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗನ್ನು ಹೆಚ್ಚಿಸಿದ್ದು, ಅನ್ಯರಾಜ್ಯದ 6 ವಿದ್ಯಾರ್ಥಿಗಳು ಇಲ್ಲಿ ಕನ್ನಡ ಅಭ್ಯಸಿಸಿ, ಯಕ್ಷಗಾನದಲ್ಲೂ ವಿಜೃಂಭಿಸಿರುವುದು ವಿಶೇಷ.
ಎರಡು ವರ್ಷದ ಹಿಂದೆ ಮುಚ್ಚುವ ಪರಿಸ್ಥಿತಿ ಎದುರಾದಾಗ ವರ್ಗಾವಣೆಗೊಂಡು ಶಾಲೆಗೆ ಬಂದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶಿಕ್ಷಕಿ ಚೇತನಕುಮಾರಿ ಅವರ ಪ್ರಯತ್ನದ ಫಲವಾಗಿ 5 ಮಕ್ಕಳಿದ್ದ ಶಾಲೆಯಲ್ಲಿ ಈಗ 22 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅದರಲ್ಲೂ ಅನ್ಯ ರಾಜ್ಯದ ವಲಸೆ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ದೆಸೆಯಲ್ಲಿ ರಾಜಸ್ಥಾನ, ಬಿಹಾರ ಮೂಲದ 6 ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡು ಅವರಿಗೆ ಕನ್ನಡ ಓದಲು ಮತ್ತು ಬರೆಯಲು ಅಭ್ಯಾಸ ಮಾಡಿಸಿದಲ್ಲದೆ ಅವರನ್ನು ಯಕ್ಷಗಾನದ ರಂಗಸ್ಥಳದಲ್ಲೂ ಧಿಗಿಣ ಹಾಕುವಷ್ಟರ ಮಟ್ಟಿಗೆ ಸಜ್ಜುಗೊಳಿಸಿರುವ ಶಿಕ್ಷಕಿಯ ಸಾಧನೆ ಸ್ಥಳೀಯವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಬಿಹಾರ, ರಾಜಸ್ಥಾನ ಮೂಲದ ಮಕ್ಕಳು ಕೂಡ ಕರಾವಳಿಯ ಗಂಡುಕಲೆ ಯಕ್ಷಗಾನದ ವೇಷಭೂಷಣ ಧರಿಸಿ ನಾಟ್ಯ, ಧಿಗಿಣದ ಪ್ರದರ್ಶನ ನೀಡಿ ತಾವು ಸೈ ಎನಿಸಿಕೊಂಡಿದ್ದಾರೆ.
ಸಭಾ ಕಾರ್ಯಕ್ರಮ: ಉದ್ಯಮಿ ಪದ್ಮಾವತಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸ್ಥಳದಾನಿ ಅನಂತ ಶೆಣೈ ಕಂಟಿಕ, ಬಾಳ್ತಿಲ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಸತ್ಯಸಾಯಿ ಸಂಸ್ಥೆಯ ನಾರಾಯಣ ಕಾರಂತ್- ಮೂಕಾಂಬಿಕಾ ದಂಪತಿ, ಶ್ರೀ ಶಾರದಾ ಗಣಪತಿ ಶಿಕ್ಷಣ ಸಂಸ್ಥೆ ಸಂಚಾಲಕ ರಾಜಾರಾಮ್ ಭಟ್, ವಿವೇಕ ಜಾಗೃತಾ ಬಳಗ ಅಧ್ಯಕ್ಷೆ ಜಯಲಕ್ಷ್ಮೀ ಗಿರಿಧರ್, ಬಂಟ್ವಾಳ ಬಿಆರ್‌ಸಿಯ ಐಆರ್‌ಟಿಗಳಾದ ರವೀಂದ್ರ, ಸುರೇಖಾ, ಗ್ರಾಪಂ ಸದಸ್ಯ ರಾಜೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ಶಿಕ್ಷಕಿ ಸುಜಾತಾ, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ವೇತಾ, ಅಂಗನವಾಡಿ ಶಿಕ್ಷಕಿ ತನುಜಾ ಮೊದಲಾದವರಿದ್ದರು. ಪ್ರಭಾರ ಮುಖ್ಯಶಿಕ್ಷಕಿ ಚೇತನ ಸ್ವಾಗತಿಸಿದರು. ಶಿಕ್ಷಕ ಮಧುಸೂದನ್ ಪ್ರಸ್ತಾವನೆಗೈದರು. ಗೌರವ ಶಿಕ್ಷಕಿಯರಾದ ಮೋನಿಷಾ ಸಹಕರಿಸಿದರು. ಶಿಕ್ಷಕಿ ಜಯಂತಿ ನಿರೂಪಿಸಿದರು. ಅಲೆತ್ತೂರು ನರಸಿಂಹ ಮಯ್ಯ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಯಕ್ಷಗಾನ ವೈಭವ ಶ್ರೀಕೃಷ್ಣ ಲೀಲೆ, ಕಂಸ ವಧೆ ಪ್ರದರ್ಶನಗೊಂಡಿತು.