

ಬ್ರಿಸ್ಬೇನ್: ಶುಕ್ರವಾರದಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮೊದಲ ದಿನದಾಟದ ಬಳಿಕ ಉಳಿದ 4 ದಿನಗಳಿಗೆ ಮಳೆ ಅಡಚಣೆ ತರುವ ಸಾಧ್ಯತೆ ಇದೆ.
ಪಂದ್ಯದ 3 ಮತ್ತು 4ನೇ ದಿನದಾಟದಲ್ಲಿ ಹೆಚ್ಚಿನ ಮಳೆ ಕಾಡುವ ಭೀತಿ ಇದೆ. ಆದರೆ ಆಸ್ಟ್ರೇಲಿಯಾದ ಮೈದಾನಗಳು ಉತ್ತಮ ಒಳಚರಂಡಿ ವ್ಯವಸ್ಥೆ ಹೊಂದಿರುವುದರಿಂದ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಆಟ ಆರಂಭಿಸಬಹುದಾಗಿದೆ.
ಇದನ್ನೂ ಓದಿ: ಸಾನಿಯಾ ಮಿರ್ಜಾ ಸಾಧನೆಯ ಹಾದಿಯಲ್ಲಿ ಅಂಕಿತಾ ರೈನಾ
ಮಳೆ ಅಡ್ಡಿಯಿಂದಾಗಿ ಪಂದ್ಯ ಡ್ರಾಗೊಂಡು ಸರಣಿ 1-1 ಸಮಬಲದಲ್ಲೇ ಅಂತ್ಯಗೊಂಡರೆ, 2018-19ರ ಕೊನೇ ಸರಣಿ ಗೆದ್ದಿರುವ ಭಾರತ ತಂಡವೇ ಬಾರ್ಡರ್-ಗಾವಸ್ಕರ್ ಟ್ರೋಫಿ ಉಳಿಸಿಕೊಳ್ಳಲಿದೆ. 2003-04ರ ಆಸೀಸ್ ಪ್ರವಾಸದಲ್ಲಿ ಕೊನೆಯದಾಗಿ ಭಾರತ 1-1 ಡ್ರಾ ಸಾಧಿಸಿತ್ತು.
ಬ್ರಿಸ್ಬೇನ್ ಹೋಟೆಲ್‌ನಲ್ಲಿ ಸೌಕರ್ಯ ಕೊರತೆ, ಮಧ್ಯಪ್ರವೇಶಿಸಿದ ಬಿಸಿಸಿಐ
ಅಂತಿಮ ಟೆಸ್ಟ್‌ಗಾಗಿ ಬ್ರಿಸ್ಬೇನ್‌ಗೆ ತೆರಳಿದ ಭಾರತ ತಂಡಕ್ಕೆ ಹೋಟೆಲ್‌ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿತ್ತು. ಆಟಗಾರರಿಗೆ ಲ್‌ಟಿ, ಈಜುಕೊಳ ಮತ್ತು ಜಿಮ್ ಬಳಕೆ ನಿರ್ಬಂಧಿಸಿದ್ದಲ್ಲದೆ, ರೂಮ್ ಸರ್ವಿಸ್ ಮತ್ತು ಹೌಸ್‌ಕೀಪಿಂಗ್ ಕೂಡ ನೀಡಲಾಗಿರಲಿಲ್ಲ. ಈ ಬಗ್ಗೆ ಭಾರತ ತಂಡ ಆಕ್ಷೇಪ ಎತ್ತಿದ ಬೆನ್ನಲ್ಲೇ ಬಿಸಿಸಿಐ ಮಧ್ಯಪ್ರವೇಶ ಮಾಡಿದ್ದು, ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಅಧಿಕಾರಿಗಳ ಜತೆಗೆ ಚರ್ಚಿಸಿದೆ. ಕೂಡಲೆ ಹೋಟೆಲ್‌ನಲ್ಲಿ ಮೇಲಿನ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಟೀಮ್ ಮೀಟಿಂಗ್‌ಗೆ ಪ್ರತ್ಯೇಕ ಕೋಣೆಯನ್ನೂ ನೀಡಲಾಗಿದೆ.
ಸ್ಲೆಡ್ಜಿಂಗ್‌ಗೆ ಕ್ಷಮೆಯಾಚಿಸಿದ ಪೇನ್
ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಭಾರತೀಯರ, ಅದರಲ್ಲೂ ಪ್ರಮುಖವಾಗಿ ಆರ್. ಅಶ್ವಿನ್ ವಿರುದ್ಧ ಸತತ ಸ್ಲೆಡ್ಜಿಂಗ್ ದಾಳಿ ಮಾಡಿದ ಆಸೀಸ್ ನಾಯಕ ಟಿಮ್ ಪೇನ್, ತಮ್ಮ ವರ್ತನೆಯ ಬಗ್ಗೆ ಮಂಗಳವಾರ ಕ್ಷಮೆಯಾಚಿಸಿದ್ದಾರೆ. ಸಮರ್ಥ ನಾಯಕತ್ವ ನನ್ನದಾಗಿರಲಿಲ್ಲ. ಅಶ್ವಿನ್ ವಿರುದ್ಧ ಸ್ಲೆಡ್ಜಿಂಗ್ ಮಾಡುವ ಮೂಲಕ ನಾನು ಮೂರ್ಖನಂತೆ ಕಂಡುಬಂದೆ ಎಂದು ಪೇನ್ ಹೇಳಿದ್ದಾರೆ. ದಿನದಾಟದಲ್ಲಿ 3 ಕ್ಯಾಚ್ ಕೂಡ ಕೈಚೆಲ್ಲಿದ್ದ ಪೇನ್, ಆಸೀಸ್ ಗೆಲುವು ತಪ್ಪಲು ಕೂಡ ಪರೋಕ್ಷವಾಗಿ ಕಾರಣರಾಗಿದ್ದರು.