

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮನೆ ಛಾವಣಿ ಕುಸಿದು ತಂದೆ-ಮಗ ದುರ್ಮರಣಕ್ಕೀಡಾಗಿದ್ದು, ತಾಯಿ-ಮಗಳ ಸ್ಥಿತಿ ಗಂಭೀರವಾಗಿದೆ.
ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ ಗುರುವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ತಂದೆ ರವಿಕುಮಾರ್ (42) ಮತ್ತು ಪುತ್ರ ರಾಹುಲ್(15) ಮೃತರು. ತಾಯಿ ಮುನಿರಾಜಮ್ಮ(37) ಮತ್ತು ಮಗಳು ರಕ್ಷಿತಾ (16) ಗಂಭೀರ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಛಾವಣಿ ಕುಸಿದಿದೆ.
ಈ ಭಾರಿ ಮಳೆ ತಂದೊಡ್ಡಿದ ಅವಾಂತರ ಅಷ್ಟಿಷ್ಟಲ್ಲ. ಹದಿನೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಮಳೆಯಿಂದಾಗಿ ಮನೆ ಛಾವಣಿ ಕುಸಿದು ಒಂದೇ ಕುಟುಂಬ ಇಬ್ಬರು ಬಲಿಯಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಭೇಟಿನೀಡಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸ್ಥಳಕ್ಕೆ ಬಂದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ ತಲಾ 50 ಸಾವಿರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.