ರಾಮಕೃಷ್ಣ ಆಶ್ರಮದಲ್ಲಿ ಬಾಲಕನ ಮೇಲೆ ಸ್ವಾಮೀಜಿ ಹಲ್ಲೆ: ಬಂಧನ

ASHRAMA
ರಾಯಚೂರಿನ ಉದಯನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮ
Published on

ರಾಯಚೂರು: ಇಲ್ಲಿಯ ಸ್ಟೇಷನ್ ರಸ್ತೆಯ ಉದಯ ನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಬಾಲಕನ ಮೇಲೆ ಅಲ್ಲಿನ ಸ್ವಾಮೀಜಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಆಶ್ರಮ ನಡೆಸುತ್ತಿರುವ ಮತ್ತು ಸ್ವಾಮೀಜಿ ಎಂದು ಕರೆಯಿಸಿಕೊಳ್ಳುವ ಪಿ.ವೇಣುಗೋಪಾಲ ಅವರು ಮಕ್ಕಳನ್ನು ಸೇರಿಸಿಕೊಳ್ಳುವಾಗ ‘ನಾವು ಇಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೇವೆ’ ಎಂದು ಹೇಳಿದ್ದರು. ಆದರೆ, ನಮ್ಮಿಂದ ಕೆಲಸಗಳನ್ನು ಮಾಡಿಸುತ್ತಿದ್ದ ಎಂಬುದು ಅಲ್ಲಿನ ಮಕ್ಕಳ ಆರೋಪ. ಬಡತನ ಕಾರಣ ಒಂಬತ್ತು ವರ್ಷದ ಬಾಲಕನನ್ನು ಆಶ್ರಮದಲ್ಲಿ ಬಿಡಲಾಗಿತ್ತು.

ಹಲ್ಲೆ ಮಾಡಿದ ಆಶ್ರಮದ ಗುರು ಪಿ.ವೇಣುಗೋಪಾಲ
ಹಲ್ಲೆ ಮಾಡಿದ ಆಶ್ರಮದ ಗುರು ಪಿ.ವೇಣುಗೋಪಾಲ

ಜು.28ರಂದು ಆ ಬಾಲಕನನ್ನು ಮನಬಂದಂತೆ ಥಳಿಸಿ, ಕಣ್ಣು-ದೇಹದ ಇತರ ಭಾಗಗಳನ್ನು ವೇಣುಗೋಪಾಲ ಗಾಯಗೊಳಿಸಿದ್ದಾರೆ. ಹಲ್ಲೆಯಿಂದ ಬಾಲಕನ ಕಣ್ಣು ಊದಿಕೊಂಡಿದ್ದು, ಮೈಮೇಲೆ ಗಂಭೀರ ಗಾಯಗಳಾಗಿವೆ. ಪೆನ್ನನ್ನು ಬಚ್ಚಿಟ್ಟಿದ್ದರಿಂದ ಬಂದು ಹೊಡೆದ ಎಂದು ಹಲ್ಲೆಗೊಳಗಾದ ಬಾಲಕ ಹೇಳುತ್ತಿದ್ದಾನೆ. ಆಶ್ರಮದಲ್ಲಿ 12 ಮಕ್ಕಳಿದ್ದು, ಎಲ್ಲರಿಗೂ ಹೊಡೆಯುವುದು, ಅವರಿಂದ ಕೆಲಸಗಳನ್ನು ಮಾಡಿಸಿಕೊಳ್ಳುವುದು, ಬಟ್ಟೆ ತೊಳೆಸಿಕೊಳ್ಳುವುದು, ಬೆಳಗ್ಗೆ ಮಕ್ಕಳನ್ನು ಕಾಲಿನಿಂದ ಒದ್ದು ಎಬ್ಬಿಸುತ್ತಿದ್ದ ಎಂದು ಮಕ್ಕಳು ತಿಳಿಸಿದ್ದಾರೆ.

ಈ ಕುರಿತು ಪಶ್ಚಿಮ ಠಾಣೆಗೆ ಮಗುವಿನ ತಾಯಿ ದೂರು ಸಲ್ಲಿಸಿದ್ದು, ಪೊಲೀಸರು ಎ್ಐಆರ್ ದಾಖಲಿಸಿದ್ದಾರೆ. ಆರೋಪಿ ವೇಣುಗೋಪಾಲನನ್ನು ಬಾಲಾಪರಾಧ ನ್ಯಾಯ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಆಶ್ರಮದಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಲು ಯಾವುದೇ ಪರವಾನಗಿ ಪಡೆದಿಲ್ಲ ಮತ್ತು ನಿಯಮಬಾಹಿರವಾಗಿ ಮಕ್ಕಳನ್ನು ಆಶ್ರಮಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ಆಶ್ರಮದಲ್ಲಿದ್ದ ಮಕ್ಕಳನ್ನು ಬಾಲಭವನಕ್ಕೆ ಸ್ಥಳಾಂತರಿಸಲಾಗಿದೆ.

ಆಶ್ರಮದಲ್ಲಿ ಮಗುವಿನ ಮೇಲೆ ಹಲ್ಲೆ ಮಾಡಿದ ಬಗ್ಗೆ ಮಾಹಿತಿಯಿದ್ದು, ಆಶ್ರಮದ ವೇಣುಗೋಪಾಲ ಎಂಬಾತನ ವಿರುದ್ಧ ಜೆಜೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. | ಎಂ.ಪುಟ್ಟಮಾದಯ್ಯ, ಎಸ್‌ಪಿ, ರಾಯಚೂರು.

ಮಕ್ಕಳ ಮೇಲೆ ಹಲ್ಲೆ ಮಾಡಿದ ಸ್ವಾಮೀಜಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು. ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ಧ ಕಾನೂನಿನಡಿ ಶಿಕ್ಷೆಯಾಗಲಿದೆ.| ಸುದರ್ಶನ್, ಜಿಲ್ಲಾ ಸಂಯೋಜಕ, ಮಕ್ಕಳ ಸಹಾಯವಾಣಿ, ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net