ಮೋದಿಯವರಿಂದ ದ್ವೇಷದ ರಾಜಕಾರಣ: ಎನ್.ಎಸ್ ಬೋಸರಾಜು

IMG_20240927_234102
Published on

ರಾಯಚೂರು: ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ, ಸಮಸ್ಯೆಗಳು ಯಾವುದು ಬೇಕಾಗಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ತೆಗೆದುಹಾಕಬೇಕು. ಇರುವ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳ ಹೆಸರಿಗೆ ಮಸಿ ಬಳಿಯಬೇಕೆಂಬ ಉದ್ದೇಶದಿಂದ ಮುಡಾ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೊಸರಾಜು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಬಿಜೆಪಿಗೆ ಎದುರಾಗುವ ಪಕ್ಷಗಳ ವಿರುದ್ಧ ಸಿಬಿಐ ಹಾಗೂ ಇಡಿ ತನಿಖಾ ಸಂಸ್ಥೆಗಳನ್ನು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಉಪಯೋಗ ಮಾಡಿಕೊಳ್ಳುತ್ತಿದೆ. ರಾಜಪಾಲರು ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ತಮ್ಮ ಕಚೇರಿಯನ್ನಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಎಂದೂ ಕೂಡ ದ್ವೇಷದ ರಾಜಕಾರಣ ಮಾಡಿಲ್ಲ ಅದನ್ನೂ ಮಾಡುವವರು ಮೋದಿಯವರು ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಯಾವುದೇ ರಾಜ್ಯದ ರಾಜಪಾಲರ ವಿರುದ್ಧ ಸಂಘರ್ಷಗಳಾಗಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ಬಿಜೆಪಿ ನಾಯಕರಲ್ಲಿಯೇ ಗುಂಪುಗಳಾಗಿದ್ದು, ಒಂದೊಂದು ಗುಂಪು ತಮ್ಮ ಅಸ್ತಿತ್ವವನ್ನು ಬಿಜೆಪಿ ಹೈಕಮಾಂಡ್‌ಗೆ ತೋರಿಸಿಕೊಳ್ಳುತ್ತಿವೆ. ಸಿಎಂ ಸಿದ್ದರಾಮಯ್ಯ ಹಿಂದೆ ಎಲ್ಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net