

ರಾಯಚೂರು: ಪ್ರವಾಸೋದ್ಯಮ ಅಭಿವೃದ್ಧಿಯಾದಲ್ಲಿ ಆ ಪ್ರದೇಶವೂ ಅಭಿವೃದ್ಧಿಗೊಳ್ಳುತ್ತದೆ ಆದ್ದರಿಂದ ಪ್ರವಾಸೋದ್ಯಮಕ್ಕೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಹೇಳಿದರು.
ನಗರದ ಬಸ್ ನಿಲ್ದಾಣದ ಹತ್ತಿರವಿರುವ ಮೆಕ್ಕಾ ದರ್ವಾಜಾ ಕೋಟೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಬಾಡಿಗೆದಾರನಿಂದಲೇ ಮನೆ ಒನರ್ ಹತ್ಯೆ
ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಸರ್ಕಾರದಿಂದ ರಾಯಚೂರು ಕೋಟೆ ಅಭಿವೃದ್ಧಿಗೆ ಒಂದು ವರ್ಷದ ಹಿಂದೆ 1 ಕೋಟಿ ರೂ. ಅನುದಾನ ನೀಡಲಾಗಿತ್ತು ಆದರೆ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಅಧಿಕಾರಿಗಳು ನಿದ್ದೆಯಿಂದ ಏಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರವಾಸೋದ್ಯಮ ಎಂಬುವುದು ಬಹುಮುಖ್ಯವಾದದ್ದು, ಆದರೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪ್ರವಾಸೋದ್ಯಮ ಸಚಿವರ ಸಮ್ಮುಖದಲ್ಲಿ ಮೇಲಾಧಿಕಾರಿಗಳಿಗೆ ಕೇಳಿದಾಗ ಜಿಲ್ಲೆಯ ಅಧಿಕಾರಿಗಳಿಂದ ಪ್ರಸ್ತಾವನೆಗಳು ಬರುತ್ತಿಲ್ಲ ಎಂಬುವ ಉತ್ತರ ನೀಡುತ್ತಾರೆ. ಜಿಲ್ಲೆಯ ಅಭಿವೃದ್ಧಿಗೆ ಇಲ್ಲಿನ ಅಧಿಕಾರಿಗಳು ನಿರ್ಲಕ್ಷೃ ವಹಿಸದೇ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಉಪಾಧ್ಯಕ್ಷ ಸಾಜೀದ್ ಸಮೀರ್, ನಗರಸಭೆ ಸದಸ್ಯ ಜಯಣ್ಣ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಎಡಿಸಿ ಶಿವಾನಂದ ಭಜಂತ್ರಿ, ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜೇಂದ್ರ ಜಲ್ದಾರ್, ಸರ್ಕಾರಿ ವಸ್ತು ಸಂಗ್ರಹಾಲಯದ ಪ್ರಭಾರಿ ಕ್ಯೂರೇಟರ್ ಶಿವಪ್ರಕಾಶ, ರಾಯಚೂರು ವಿವಿಯ ಎನ್.ಎಸ್.ಎಸ್ ಸಂಯೋಜಕ ಜಿ.ಎಸ್ ಬಿರಾದಾರ ಸೇರಿದಂತೆ ಇತರರಿದ್ದರು.