

ರಾಯಚೂರು: ಬೆಳೆದು ನಿಂತ 20 ಗಿಡಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ನಿಯಮಬಾಹೀರವಾಗಿ ಕೆಪಿಟಿಸಿಎಲ್ ಸಿಬ್ಬಂದಿ ಕಡೆದುಹಾಕಿದ್ದು, ಈ ಬಗ್ಗೆ ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲಿಸಿಕೊಂಡ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ನಗರದ ಯಕ್ಲಾಸಪೂರ ರಸ್ತೆಯ ಬಂದೇನವಾಜ್ ಕಾಲನಿಯ ಅಶ್ವಿನಿ ಲೇಔಟ್ ಹತ್ತಿರ ರಸ್ತೆಯ ಪಕ್ಕದಲ್ಲಿ ಬೆಳೆಸಲಾಗಿದ್ದ ಗಿಡಗಳನ್ನು ಕೆಪಿಟಿಸಿಎಲ್ನ ಸಿಬ್ಬಂದಿ ಮತ್ತು ದಿನಗೂಲಿ ಕಾರ್ಮಿಕರು ವಿದ್ಯುತ್ ವೈರ್ಗಳಿಗೆ ಅಡ್ಡವಾಗುತ್ತವೆ ಎಂದು ಬಡ್ಡೆ ಸಮೇತ ಕಡಿದು ಹಾಕಿದ್ದಾರೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಗಿಡಗಳನ್ನು ಕಡಿದ ಸಿಬ್ಬಂದಿಗಳನ್ನು ಅರಣ್ಯ ಇಲಾಖೆಯ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಗಿಡಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂಬುವುದು ಬೆಳಕಿಗೆ ಬಂದಿದೆ.
ಕೆಪಿಟಿಸಿಎಲ್ ಬೃಹತ್ತಾದ ವಿದ್ಯುತ್ ವೈರ್ಗಳಿಗೆ ಅಡ್ಡವಾಗುವ ಗಿಡಮರಗಳ ರೆಂಬೆಗಳನ್ನು ಕಡಿಯುವ ಅಧಿಕಾರ ಹೊಂದಿದ್ದು, ಸಂಪೂರ್ಣ ಗಿಡಗಳನ್ನೇ ಕಡಿದು ಹಾಕಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಗಿಡಗಳನ್ನು ಕಡಿಯುವ ಕಾರ್ಯವನ್ನು ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ಇಲಾಖೆ ಖಾಸಗಿ ಏಜೆನ್ಸಿಗಳಿಗೆ ನೀಡುತ್ತವೆ ಏಜೆನ್ಸಿಯವರು ದಿನಗೂಲಿ ಕಾರ್ಮಿಕರಿಂದ ವೈರ್ನಿಂದ ಮೂರು ಅಥವಾ ನಾಲ್ಕು ಮೀಟರ್ ಹತ್ತಿರವಿರುವ ಗಿಡಗಳ ರೆಂಬೆಗಳನ್ನು ಕಡಿಸುತ್ತಾರೆ. ಆದರೆ ಇಡೀ ಗಿಡಗಳನ್ನೇ ಕಡಿಯುವ ನಿಯಮ ಅಥವಾ ಅಧಿಕಾರ ಯಾವ ಇಲಾಖೆಗೂ ಇಲ್ಲ. ಅದರಲ್ಲೂ ಯಾವುದೇ ಗಿಡ ಅಥವಾ ಮರವನ್ನು ಕಡಿಯಲು ಮೊದಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂಬುವುದು ಸ್ಥಳೀಯರ ವಾದವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ದಂಡ ವಿಧಿಸಿದ್ದಾರೆ ಒಂದು ವೇಳೆ ದಂಡ ಕಟ್ಟಲು ನಿಗಮ ಅಥವಾ ಗುತ್ತಿಗೆ ಪಡೆದ ಏಜೆನ್ಸಿ ನಿರಾಕರಿಸಿದ್ದಲ್ಲಿ ಪ್ರಕರಣವನ್ನು ಕೋರ್ಟ್ಗೆ ಹಾಜರುಪಡಿಸುವುದಾಗಿ ಇಲಾಖೆ ತಿಳಿಸಿದೆ.
ಯಕ್ಲಾಸಪೂರ ರಸ್ತೆಯಲ್ಲಿ ಗಿಡಮರಗಳನ್ನು ಕಡಿಯಲು ಕೆಪಿಟಿಸಿಎಲ್ ಅಥವಾ ಯಾವುದೇ ಏಜೆನ್ಸಿಯಿಂದ ಅನುಮತಿ ಪಡೆದುಕೊಂಡಿಲ್ಲ. ಈ ಕಾರ್ಯ ನಿಯಮಬಾಹೀರವಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗಿದೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. -ರಾಜೇಶ್, ವಲಯ ಅರಣ್ಯ ಅಧಿಕಾರಿ, ರಾಯಚೂರು. ಕಡಿಯಲಾಗಿರುವ ಮರಗಳು ಕೇವಲ ಹೊಂಗೆ ಹಾಗೂ ಬೇವಿನ ಮರಗಳಾಗಿವೆ. ವಿದ್ಯುತ್ ವೈರ್ಗಳು 60 ಅಡಿ ಎತ್ತರದಲ್ಲಿರುತ್ತವೆ. ಈ ಗಿಡಗಳು ಅಷ್ಟು ಎತ್ತರಕ್ಕೆ ಬೆಳೆಯುದಿಲ್ಲ. ಮರಗಳನ್ನು ಕಡಿದು ಹಾಕಿರುವುದು ಸರಿಯಾದ ಕ್ರಮವಲ್ಲ. -ನಾಗನಗೌಡ, ಸ್ಥಳೀಯರು, ರಾಯಚೂರು