ಕುಸಿಯುತ್ತಿವೆ ಕೋಟೆ ಕೊತ್ತಲುಗಳು: ಕಣ್ಮರೆಯಾಗುತ್ತಿದೆ ಇತಿಹಾಸ

IMG-20240928-WA0060
Published on

ರಾಯಚೂರು: ರಾಯಚೂರು ಕೋಟೆ ಶತ್ರುಗಳ ದಾಳಿಗೆ ನಡುಗದೆ ಇತಿಹಾಸವನ್ನು ಸಾರುತ್ತಿದೆ. ನಾಡಿನ ರಕ್ಷಣೆಗೆಂದು ರಾಜರ ಕಾಲದಲ್ಲಿ ನಿರ್ಮಿಸಲಾದ ಬೃಹತ್ ರಕ್ಷಣಾ ಗೋಡೆ, ಅಭಿವೃದ್ಧಿ ಕಾಣದೇ ಇಲ್ಲಿನ ಕೋಟೆಯ ಕೊತ್ತಲಗಳು ಕುಸಿಯುತ್ತಿವೆ.

ರಾಯಚೂರು ನಗರದ ಬಸ್ ನಿಲ್ದಾಣದ ಹತ್ತಿರವಿರುವ ರಾಯಚೂರು ಕೋಟೆ ಕಿ.ಶ 1294 ರಲ್ಲಿ ಕಾಕತೀಯರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅಂದಿನಿಂದ ಎಷ್ಟೇ ದಾಳಿಗಳಾದರೂ ಗಟ್ಟಿಯಾಗಿ ನಿಂತಿದ್ದ ಕೋಟೆ ಇದೀಗ ಅಧಿಕಾರಿಗಳ ನಿರ್ಲಕ್ಷೃದಿಂದ ದುಸ್ಥಿತಿಗೆ ತಲುಪಿದೆ. ಸಂರಕ್ಷಣೆಗೆ ಅಧಿಕಾರಿಗಳು ಮುಂದಾಗದೇ ಮುಂದಿನ ದಿನಗಳಲ್ಲಿ ಇತಿಹಾಸ ಕಣ್ಮರೆಯಾಗುವ ಸಾಧ್ಯತೆಯೂ ಇದೆ.

ಬಸ್ ನಿಲ್ದಾಣದ ಹತ್ತಿರವಿರುವ ಬೆಟ್ಟದ ಮೇಲೆ ಕೋಟೆಯ ಕುರುಹುಗಳು ಈಗಲು ಕಾಣಸಿಗುತ್ತವೆ. ಹಿಂದೆ ಆಳ್ವೆಕೆ ಮಾಡಿದಂತ ರಾಜಮನೆತನಗಳು ಕಟ್ಟಿಸಿದ ಮಂದಿರಗಳು, ಮಂಟಪ, ದರ್ಗಾಗಳನ್ನು ಈಗಲೂ ನೋಡಬಹುದಾಗಿದೆ. ಐತಿಹಾಸಿಕ ಹಿನ್ನೆಲೆ ಹೊಂದಿದ ಕೋಟೆಯು ಅಭಿವೃದ್ಧಿ ಹೊಂದಿದ್ದಲ್ಲಿ ರಾಯಚೂರು ನಗರ ಪ್ರವಾಸಿ ತಾಣವಾಗಬಹುದಾಗಿದೆ ಆದರೆ ಅಧಿಕಾರಿಗಳು ಮಾತ್ರ ಕೋಟೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ.

ರಾಯಚೂರಿನ ಟ್ಯಾಗೂರ್ ಕಾಲೇಜು ಹಿಂಬಂದಿಯಲ್ಲಿ ಕೋಟೆಯ ಕೊತ್ತಲ ಕುಸಿಸಿರುವುದು.
ರಾಯಚೂರಿನ ಟ್ಯಾಗೂರ್ ಕಾಲೇಜು ಹಿಂಬಂದಿಯಲ್ಲಿ ಕೋಟೆಯ ಕೊತ್ತಲ ಕುಸಿಸಿರುವುದು.

ನಗರಸಭೆಯಿಂದ ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರುತ್ತಿರುವ ರಾಯಚೂರು ನಗರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಇಲ್ಲಿನ ಅಧಿಕಾರಿಗಳು ಮುಂದಾಗುತ್ತಿಲ್ಲ.
ಇತ್ತೀಚೆಗೆ ಕೋಟೆಯ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರ, ಪುರಾತತ್ವ ಸಂಗ್ರಹಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪ್ರವಾಸೋದ್ಯಮ ದಿನಾಚರಣೆಗೆ ಸ್ವಚ್ಛತೆ ಮಾಡಿಸಿದ್ದರು. ಆದರೆ ಕೇವಲ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾತ್ರ ಸ್ವಚ್ಛ ಮಾಡಿಸಿ, ಕೋಟೆಯ ಹಿಂಬದಿಯನ್ನು ಹಾಗೆಯೇ ಬಿಟ್ಟಿದ್ದಾರೆ.

ಕೋಟೆಯ ಸುತ್ತಲಿನ ಕಂದಕಗಳಲ್ಲಿ ಗಿಡ ಗಂಟಿಗಳು ಬೆಳೆದು ನಿಂತು ನಗರದ ತ್ಯಾಜ್ಯದಿಂದ ಕಂದಕಗಳಲ್ಲಿರುವ ನೀರು ಗಬ್ಬು ನಾರುತ್ತಿದೆ. ಅನೇಕ ವರ್ಷಗಳಿಂದ ಕೋಟೆಯ ಸ್ವಚ್ಛತೆಯಾಗಲಿ, ಕೋಟೆಯ ಅಭಿವೃದ್ಧಿಗಾಗಲಿ ಇಲ್ಲಿನ ಅಧಿಕಾರಿಗಳು ಮುಮದಾಗುತ್ತಿಲ್ಲ.

ರಾಯಚೂರ ನಗರದಲ್ಲಿ 30ಕ್ಕೂ ಹೆಚ್ಚಿನ ಕೋಟೆ ಕೊತ್ತಲಗಳಿದ್ದು, ಹಿಂದೆ ಸೈನಿಕರು ಈ ಕೊತ್ತಲಗಳಲ್ಲಿ ಕೂತು ಕಾವಲು ಕಾಯುತ್ತಿದ್ದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಈ ಕೊತ್ತಲಗಳು ಇದೀಗ ಮಾಯವಾಗುತ್ತಿದ್ದು, ಕೊತ್ತಲಗಳಲ್ಲಿ ದೊಡ್ಡ ದೊಡ್ಡ ಮರಗಳು ಬೆಳೆದು ಕುಸಿಯುತ್ತಿವೆ.

ಬಸ್ ನಿಲ್ದಾಣದ ಹತ್ತಿರವಿರುವ ಮೆಕ್ಕಾ ದರ್ವಾಜಾ ಮೇಲ್ಭಾಗದಲ್ಲಿ ಸಾರ್ವಜನಿಕರಿಗೆ ವಾಯು ವಿಹಾರ ಮಾಡಲು ಅನುಕೂಲವಾಗುವಂತೆ. ನಗರಸಭೆಯಿಂದ 35 ಲಕ್ಷ ವೆಚ್ಚದಲ್ಲಿ ಸೋಲರ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು ಆದರೆ ಕೋಟೆಗೆ ಕಾವಲುಗಾರರಿಲ್ಲದೇ ಇರುವುದರಿಂದ ದೀಪಗಳ ಬ್ಯಾಟರಿಗಳನ್ನು ಕಳುವು ಮಾಡಲಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ಕೋಟೆ ತೀರಾ ಹದಗೆಟ್ಟಿದೆ.

ಕೋಟೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ, ಪ್ರಾಚ ವಸ್ತು ಸಂಗ್ರಹಗಳು ಮತ್ತು ಪರಂಪರೆ ಇಲಾಖೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಸಮನ್ವಯತೆಯಿಂದ ಕೋಟೆ ರಕ್ಷಣೆ ಹಾಗೂ ಅಭಿವೃದ್ಧಿ ಮಾಡಬೇಕಾಗಿದೆ. ಆದರೆ ಜಿಲ್ಲೆಯಲ್ಲಿ ಪ್ರಾಚ ವಸ್ತು ಇಲಾಖೆಗೆ ಖಾಯಂ ಕ್ಯೂರೈಟರ್ ಇಲ್ಲ. ಪ್ರಭಾರದಲ್ಲಿರುವ ಅಧಿಕಾರಿಯೂ ಕೋಟೆಯ ಬಗ್ಗೆ ಗಮನಹರಿಸುತ್ತಿಲ್ಲ. ಈ ಕಾರಣದಿಂದಲೇ ನಗರದ ಕೋಟೆಗೆ ಈ ಪರಿಸ್ಥಿತಿ ಬಂದೊದಗಿದೆ.

ರಾಯಚೂರು ನಗರದಲ್ಲಿರುವ ಕೋಟೆಯ ಸುತ್ತಲೂ 3600 ಮೀಟರ್‌ಗೂ ಅಧಿಕ ಉದ್ದದ ತಡಗೋಡೆ ಸುತ್ತುವರೆದಿದೆ. ಕೇಂದ್ರ ಬಸ್ ನಿಲ್ದಾಣದ ಹತ್ತಿರವಿರುವ ಮೆಕ್ಕಾ ದರ್ವಾಜಾದಿಂದ ಆರಂಭವಾಗಿ ಬಸವೇಶ್ವರ ವೃತ್ತ, ಮೋತಿ ಮಸೀದಿ, ಹಮ್‌ದರ್ದ್ ಶಾಲೆಯ ಹತ್ತಿರವಿರುವ ನವರಂಗ್ ದರ್ವಾಜಾ, ಖಾಟಿ ದರ್ವಾಜಾ, ಮಾವಿನ ಕೆರೆ, ಆಜಾದ್ ನಗರದಿಂದ ಮರಳಿ ಬಸ್ ನಿಲ್ದಾಣದಲ್ಲಿರುವ ಮೆಕ್ಕಾ ದರ್ವಾಜಾಕ್ಕೆ ಸೇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net