

ರಾಯಚೂರು: ಸುಪ್ರಿಂ ಕೋರ್ಟ್ ತೀರ್ಪಿನನ್ವಯ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯಕ್ಕೆ ಅಧಿಕಾರ ನೀಡಲಾಗಿದ್ದು ಆದರೆ ರಾಜ್ಯಸರ್ಕಾರ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಒಳಮೀಸಲಾತಿ ಐಕ್ಯ ಹೋರಾಟ ಸಮಿತಿಯ ಸಂಚಾಲಕ ಅಂಬಣ್ಣ ಅರೋಲಿಕರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಸುಪ್ರಿಂ ಕೋರ್ಟ್‌ನ ಏಳು ಜನ ನ್ಯಾಯಮೂರ್ತಿಗಳ ಪೀಠ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದ್ದು, ಆದರೆ ಕರ್ನಾಟಕ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಸ್ವಾಗತಿಸಿ ಜಾರಿ ಮಾಡಲು ಮುಂದಾಗುತ್ತಿಲ್ಲ. ಅ.2 ರಾಜ್ಯ ಸರ್ಕಾರಕ್ಕೆ ಕೊನೆಯ ಗಡುವಾಗಿದ್ದು, ಅ.3ರಂದು ರಾಯಚೂರು ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅತ್ಯಾಚಾರ ಖಂಡಿಸಿ ಸೆ.30ಕ್ಕೆ ಯಾದಗಿರಿ ಬಂದ್: ದುಳ್ಳಯ್ಯ
ಒಳ ಮೀಸಲಾತಿ ಜಾರಿಗಾಗಿ ಹಲವು ವರ್ಷಗಳಿಂದ ನ್ಯಾಯಾಂಗ ಹೋರಾಟ ಹಾಗೂ ಬೀದಿ ಹೋರಾಟಗಳು ನಡೆಯುತ್ತಾ ಬಂದಿದ್ದು, ಹೋರಾಟದ ಪ್ರತಿಫಲವಾಗಿ ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರದಿಂದ ತೀರ್ಪು ಹೊರಬಿದ್ದು ಎರಡು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡಿಲ್ಲ ಇದು ಕಾನೂನು ದ್ರೋಹವಾಗಿದೆ ಎಂದರು.
ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಪೀಠ ಆದೇಶದ ನಂತರ ರಾಜ್ಯ ಸರ್ಕಾರ ಮತ್ತೊಂದು ತಜ್ಞರ ಸಮಿತಿ ನೇಮಿಸಲು ಹೊರಟಿರುವುದು ಸರಿಯಲ್ಲ ಸುಪ್ರಿಂ ಕೋರ್ಟ್‌ಗಿಂತ ಯಾರೂ ದೊಡ್ಡವರಲ್ಲ. ಕಾಂಗ್ರೆಸ್ ಹೈಕಮಾಂಡ್ ಒಳಮೀಸಲಾತಿ ಜಾರಿಗೆ ತಡೆಯೊಡ್ಡಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಬಾಲಸ್ವಾಮಿ ಕೊಡ್ಲಿ, ಎಂ.ವಿರುಪಾಕ್ಷಿ, ಪಿ.ಯಲ್ಲಪ್ಪ, ಜೆ.ಬಿ ರಾಜು, ಶಂಕ್ರಪ್ಪ, ವಿಕ್ರಂ, ವೀರೇಶ ಸೇರಿದಂತೆ ಇತರರಿದ್ದರು.