ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯ

  • ಅಧಿಕಾರಿಗಳ ಬೇಜವಾಬ್ದಾರಿ
  • ಸರ್ಕಾರದ ನಿರ್ಲಕ್ಷೃ: ಆತಂಕದಲ್ಲಿ ರೈತರು
  • 150 ಎಕರೆ ಜಮೀನಿಗೆ ಹಾನಿ ಸಾಧ್ಯತೆ

ಶಶಿಧರ ಅಂಗಡಿ

ರಾಯಚೂರು: ಕರ್ನಾಟಕ ನೀರಾವರಿ ನಿಗಮದ ಕಾಲುವೆಗಳು ರೈತರಿಗೆ ಅನುಕೂಲಕರವಾಗಿರುವ ಬಗ್ಗೆ ಕೇಳಿರುತ್ತೇವೆ ಆದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಿಗಮದ ಕಾಲುವೆ ರೈತರಿಗೆ ಮಾರಕವಾಗಿ ಪರಿಣಮಿಸಿದೆ.

ದೇವದುರ್ಗ ತಾಲೂಕಿನ ಎನ್.ಗಣೇಕಲ್ ಸಮತೋಲನಾ ಜಲಾಶಯ ತುಂಬಿಸಲು ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್ 109ರಲ್ಲಿ ನಿರ್ಮಿಸಲಾದ ಗೇಟ್ ಮೂಲಕ ಜಲಾಶಯಕ್ಕೆ ಸಂಪರ್ಕಿಸುವ ಇನ್‌ಟೆಕ್ ಕಾಲುವೆ ಅರ್ಧ ಕಿ.ಮೀನಷ್ಟು ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಇದರಿಂದ ಸುತ್ತಲಿನ ಜಮೀನುಗಳಿಗೆ ನೀರು ನುಗ್ಗುವ ಆತಂಕ ಇದೀಗ ರೈತರಲ್ಲಿ ಮೂಡಿದೆ.

ಇದನ್ನೂ ಓದಿ: ಕಾಲುವೆ ಆಧುನೀಕರಣಕ್ಕೆ 59 ಕೋಟಿ ರೂ.ಅನುದಾನ

ಅರಕೇರಾ ತಾಲೂಕು ಗಬ್ಬೂರು ಹೋಬಳಿಯ ರಾಮದುರ್ಗ ಗ್ರಾಮದಲ್ಲಿರುವ ಸರ್ವೆ ನಂ.75 ಹಾಗೂ 67ರಲ್ಲಿ ಬರುವ ಈ ಕಾಲುವೆಯ ತಿರುವಿನಲ್ಲಿ ಮೂರು ವರ್ಷಗಳ ಹಿಂದೆ ಕಾಂಕ್ರಿಟ್ ಲೈನಿಂಗ್ ಕೊಚ್ಚಿಹೋಗಿ ನೀರಿನ ರಭಸಕ್ಕೆ ಮಣ್ಣು ಕುಸಿಯುತ್ತಾ ರೈತರ ಜಮೀನಿಗೆ ನೀರು ನುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ಅನೇಕ ವರ್ಷಗಳಿಂದ ಮುಖ್ಯಮಂತ್ರಿಗಳ ಕಚೇರಿ, ಡಿಸಿ ಕಚೇರಿ ಹಾಗೂ ನೀರಾವರಿ ಇಲಾಖೆಗೆ ದೂರು ಸಲ್ಲಿಸಲಾಗಿದ್ದರೂ ಕೂಡ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯ
ಕಾಲುವೆಯ ಕಾಂಕ್ರಿಟ್ ಲೈನಿಂಗ್ ಕೊಚ್ಚಿ ಹೋಗಿರುವುದು.

ಮೊದಲಿನಿಂದಲೂ ಸರ್ಕಾರದ ಕಾಮಗಾರಿಗಳು ಕಳಪೆಯೆಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಕಾಲುವೆ ಕಾಂಕ್ರಿಟ್ ಲೈನಿಂಗ್ ಕೊಚ್ಚಿಹೋಗಿರುವುದು, ಕಾಲುವೆ ದುರಸ್ತಿಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿ ಸುಮ್ಮನಾದ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಸರ್ಕಾರದ ನಿರ್ಲಕ್ಷೃದಿಂದ ಉಂಟಾದ ಈ ಪರಿಸ್ಥಿತಿ ಮತ್ತೊಂದು ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಯಚೂರು ನಗರಸಭೆ ಇನ್ನು ಮುಂದೆ ನಗರ ಪಾಲಿಕೆ:ಸಿಎಂ ಸಿದ್ದರಾಮಯ್ಯ ಘೋಷಣೆ

2023ರ ಆ.14ರಂದು ಜಲಸಂಪನ್ಮೂಲ ಇಲಾಖೆಯ ತಾಂತ್ರಿಕ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಶುಭಾ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಮಸ್ಯೆಯ ಬಗ್ಗೆ ಪತ್ರ ಬರೆದಿದ್ದು, ಹತ್ತು ದಿನದೊಳಗೆ ವರದಿ ಸಲ್ಲಿಸಲು ತಿಳಿಸಿದ್ದರು. ವರದಿ ಸಿದ್ದಪಡಿಸಿ ಕಾಲುವೆ ದುರಸ್ತಿ ಮಾಡುವ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೈತೊಳೆದುಕೊಂಡಿರುವ ಅಧಿಕಾರಿಗಳು ಸಮಸ್ಯೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ನೋಡಲು ಇತ್ತ ತಲೆ ಹಾಕದಿರುವುದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರುತ್ತಿದೆ.

ಕಾಲುವೆ ದುರಸ್ತಿ ಕುರಿತು 2023ರ ಆ.17ರಂದು ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಕೂಡ ನೀರಾವರಿ ನಿಗಮದ ಎಂಡಿಗೆ ಪತ್ರ ಬರೆದು ಕೆಟಿಪಿಪಿ ಕಾಯ್ದೆ 4(ಎ)ದಡಿ ದುರಸ್ತಿಗೆ ಅನುದಾನದೊಂದಿಗೆ ಅನುಮೋದನೆ ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್‌ಟೆಕ್ ಚಾನಲ್ ಆರಂಭದಲ್ಲಿ ಚೈನ್ 90 ಮೀ.ನಿಂದ 265 ಮೀಟರ್‌ವರೆಗೆ ನೀರಿನ ರಭಸಕ್ಕೆ ಕಾಂಕ್ರಿಟ್ ಕುಸಿದು ಜಮೀನಿನ ಮಣ್ಣು ಕುಸಿಯುತ್ತ ಬಂದಿದೆ.

ಇದನ್ನೂ ಓದಿ: ಚುನಾವಣೆ ವೇಳೆ ಬಿಜೆಪಿಗರಿಗೆ ಮೈಮೇಲೆ ದೆವ್ವ ಬರುತ್ತೆ: ಎನ್.ಎಸ್ ಬೋಸರಾಜು ಕಿಡಿ

ಕಾಲುವೆ ದುರಸ್ತಿಗೆ 80.35 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ಸಹಾಯಕ ಕಾರ್ಯಪಾಲ ಅಭಿಂತರ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರೂ ನೀರಾವರಿ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.
ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಾಲುವೆ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕಾಗಿದೆ. ಇಲ್ಲವಾದಲ್ಲಿ ಕಾಲುವೆ ಇನ್ನಷ್ಟು ಹದಗೆಟ್ಟು ಮುಂದೆ ದೊಡ್ಡ ಪ್ರಮಾದ ಎದುರಾಗುವ ಸಾಧ್ಯತೆಯಿದೆ.

ನೂರು ಎಕರೆಗೂ ಹೆಚ್ಚಿನ ಜಮೀನುಗಳಿಗೆ ಹಾನಿ⬇

ಇಲಾಖೆಯ ಅಧೀನ ಕಾರ್ಯದರ್ಶಿ ಕಾಲುವೆ ದುರಸ್ತಿಗೆ ವರದಿ ಸಲ್ಲಿಸಲು ಹೇಳಿದ್ದರಿಂದ ಕೇವಲ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ ಅಧಿಕಾರಿಗಳು ಮತ್ತೆ ಇತ್ತ ತಲೆ ಹಾಕುತ್ತಿಲ್ಲ ಒಂದು ವರ್ಷ ಕಳೆದರೂ ಕಾಲುವೆ ದುರಸ್ತಿ ಮಾಡಲು ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ಇದೀಗ ರೈತ ಮುಖಂಡರು ಹಾಗೂ ಕಾಲುವೆ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾಲುವೆ ದುರಸ್ತಿಯಾಗದೇ ಇದ್ದಲ್ಲಿ ನೀರಿನ ರಭಸಕ್ಕೆ ಮಣ್ಣು ಕುಸಿದು ಕಾಲುವೆ ಸುತ್ತಮುತ್ತಲಿನ ಸುಮಾರು 150 ಎಕೆರೆಗೂ ಹೆಚ್ಚಿನ ಜಮೀನುಗಳಿಗೆ ನೀರು ನುಗ್ಗಿ ಹಾನಿ ಉಂಟಾಗಲಿದೆ.

ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯಕಾಲುವೆ ಕೊಚ್ಚಿ ಹೋದ ಬಗ್ಗೆ ಒಂದು ವರ್ಷದ ಹಿಂದೆ ಸಂಬಂಧಪಟ್ಟ ಅಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಮತ್ತೊಮ್ಮೆ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.
| ಜಿ.ಕರೆಮ್ಮ ನಾಯಕ, ಶಾಸಕಿ, ದೇವದುರ್ಗ ಕ್ಷೇತ್ರ

ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯಕಾಲುವೆಯಿಂದ ರೈತರ ಜಮೀನುಗಳಿಗೆ ಹಾನಿ ಉಂಟಾಗುತ್ತಿರುವುದು ಸರಿಯಲ್ಲ, ಜಿಲ್ಲಾಡಳಿತ, ನೀರಾವರಿ ಇಲಾಖೆ ತ್ವರಿತವಾಗಿ ಸಮಸ್ಯೆ ಪರಿಹರಿಸಲು ಮುಂದಾಗಬೇಕು.
| ಚಾಮರಸ ಮಾಲೀಪಾಟೀಲ್, ಗೌರವಾಧ್ಯಕ್ಷ, ರಾಜ್ಯ ರೈತ ಸಂಘ

ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯಕಾಲುವೆ ಕೊಚ್ಚಿಹೋಗಿರುವ ಬಗ್ಗೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
| ಹನುಮಂತಪ್ಪ, ಮುಖ್ಯ ಅಭಿಯಂತರ, ಕರ್ನಾಟಕ ನೀರಾವರಿ ನಿಗಮ, ಮುನಿರಾಬಾದ್

ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯಕಾಲುವೆ ಕಾಂಕ್ರಿಟ್ ಕೊಚ್ಚಿ ಹೋಗಿ, ನೀರಿನ ರಭಸದಿಂದ ಹೊಲಗಳಿಗೆ ನೀರು ನುಗ್ಗುವ ಆತಂಕವಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕಿದ್ದರೂ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ.
| ಮಹಂತೇಶ, ರೈತ, ಮರಕಂದಿನ್ನಿ

ಮೂರು ವರ್ಷವಾದರೂ ಕಾಲುವೆಗಿಲ್ಲ ದುರಸ್ತಿ ಭಾಗ್ಯಕಾಲುವೆ ಪಕ್ಕದಲ್ಲಿರುವ ಜಮೀನು ಇಳಿಜಾರು ಪ್ರದೇಶದಲ್ಲಿರುವುದರಿಂದ ಕಾಲುವೆಯ ನೀರು ಹೊಲಕ್ಕೆ ನುಗ್ಗಿದರೆ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗುತ್ತದೆ ಜತೆಗೆ ಮುಂದಿನ ಹೊಲಗಳಿಗೆ ನೀರು ಹರಿಯುತ್ತದೆ.
| ರಾಚಪ್ಪ, ರೈತ, ಮರಕಂದಿನ್ನಿ

Share This Article

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…

Height Weight Chart: ಯಾವ ವಯಸ್ಸಿನಲ್ಲಿ ಎಷ್ಟು ತೂಕವನ್ನು ಹೊಂದಿರಬೇಕು ಗೊತ್ತಾ ? ಈ ಒಂದು ರಹಸ್ಯ ತಿಳಿದ್ರೆ ಕಾಯಿಲೆಗಳು ಹತ್ತಿರವು ಸುಳಿಯಲ್ಲ…

 ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೆಲವರು ಒಂದೇ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ