ರಾಯಚೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲು ಕಲ್ಯಾಣ ಕರ್ನಾಟಕದ ಉತ್ಸವದ ದಿನ(ಮಂಗಳವಾರ)ದಂದು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಲು ತೀರ್ಮಾನಿಸಿ, ಅನೇಕ ಯೋಜನೆಗಳ ಪ್ರಸ್ತಾವನೆಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಅದರಂತೆ ರಾಯಚೂರು ಜಿಲ್ಲೆಯ 1336 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ವಿವಿಧ ಯೋಜನೆಗಳ ಪ್ರಸ್ತಾವನೆಗಳನ್ನು ಸಭೆಯ ಅಜೆಂಡಾದಲ್ಲಿ ಹಾಕಿಕೊಂಡಿದ್ದ ರಾಜ್ಯ ಸರ್ಕಾರ ಎಲ್ಲ ಯೋಜನೆಗಳಿಗೆ ಸೈ ಎನ್ನುವ ಮೂಲಕ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ನೀಡಿದೆ.
ಪ್ರಮುಖವಾಗಿ ಬಹುನಿರೀಕ್ಷಿತ ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಐತಿಹಾಸಿಕ ಘೋಷಣೆಯನ್ನು ಮಾಡಿ ನಗರದ ಜನರಿಗೆ ಖುಷಿಪಡಿಸಿದೆ. ರಾಯಚೂರು ನಗರಸಭೆಯನ್ನು ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಕುರಿತು ಪತ್ರಿಕಾಗೋಷ್ಠಿಯ ಆರಂಭದಲ್ಲಿಯೇ ಸಿಎಂ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಸಚಿವ ಸಂಪುಟ ಸಭೆಗೆ ಸರ್ಕಾರಿ ಬಸ್ನಲ್ಲಿ ತೆರಳಿದ ಸಿಎಂ ಮತ್ತು ಸಚಿವರು
ರಾಯಚೂರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಚಿವ ಸಂಪುಟ ಸಭೆ ನಡೆಸಿರುವ ರಾಜ್ಯ ಸರ್ಕಾರ ಜಿಲ್ಲೆಯ ಅನೇಕ ಬೇಡಿಕೆಗಳನ್ನು ಚರ್ಚಿಸುವ ಜತೆಗೆ ಯೋಜನೆಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡುವ ಕಾರ್ಯಕ್ಕೂ ಮುಂದಾಗಿದೆ.
ರಾಯಚೂರು ಜಿಲ್ಲೆಯು ಮೊದಲಿನಿಂದಲೂ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದು, ಜಿಲ್ಲೆಯ ಅಭಿವೃದ್ಧಿಗೆ ಇದೀಗ ಕಾಲ ಕೂಡಿಬಂದಿದೆ.
ಬಹು ನಿರೀಕ್ಷಿತ ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಪಾಸ್ ಮಾಡಿದ್ದು, ಮಹಾನಗರ ಪಾಲಿಕೆಯನ್ನಾಗಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲು ತೀರ್ಮಾನಿಸಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ನೀಡಿರುವ ಸಚಿವ ಸಂಪುಟ 132 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಿದೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ನಿರ್ಣಯ
ಹಟ್ಟಿ ಚಿನ್ನದ ಗಣಿಯ ಅಧಿಕಾರಿ ಮತ್ತು ಸಿಬ್ಬಂದಿ ಸಮಗ್ರ ಟೌನ್ ಶಿಪ್ ಯೋಜನೆಗೆ 998.50 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಇದರ ಜತೆಗೆ 130 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.
ಜತೆಗೆ ಇದೇ ಗಣಿ ಕಂಪನಿಯಡಿ ಬರುವ ಹೀರಾ ಬುದ್ದಿನ್ನಿ ಗಣಿ ಕಂಪನಿಯ ಪ್ರಸ್ತುತ ಶಾಫ್ಟ್ ನ 187.60 ಮೀಟರ್‌ಗಳ ಆಳವನ್ನು 190.90 ಮೀಟರ್ ವರೆಗೆ ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದ್ದು, 363 ಮೀಟರ್ ಆಳದ ಹೊಸ ಶಾಫ್ಟನ್ನು ಅಳವಡಿಸಲು ಹಾಗೂ 5ನೇ ಹಂತದಿಂದ 11ನೇ ಹಂತದವರೆಗೆ ಗಣಿ ಚಟುವಟಿಕೆ ಕೈಗೊಳ್ಳುವ 175.74 ಕೋಟಿ ರೂ,ಗಳ ಮೊತ್ತದ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಇದನ್ನೂ ಓದಿ: ರಾಯಚೂರು ಬೀದರ್ ನಗರಸಭೆಗೆ ಮಹಾನಗರ ಪಾಲಿಕೆ ಭಾಗ್ಯ : ಸಂಪುಟ ಅಸ್ತು
ಇದಲ್ಲದೆ ಸಿಂಧನೂರು ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸಲು ಸಿಂಧನೂರು ನಗರಸಭೆ ಬಳಿಯಿರುವ 119.11 ಎಕರೆ ಪ್ರದೇಶದಲ್ಲಿ 29.80 ಆಜು ಮೊತ್ತದಲ್ಲಿ ಕೆರೆ ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಿದೆ.
ಒಟ್ಟಾರೆಯಾಗಿ ರಾಯಚೂರು ಜಿಲ್ಲೆಯ ಅಭಿವೃದ್ಧಿಗಾಗಿ ಕಳಿಸಲಾಗಿದ್ದ ಎಲ್ಲ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ.
ಹೊಸ ತಾಲೂಕುಗಳಲ್ಲಿ ಆಡಳಿತ ಸೌಧ:
ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ ಟೈಪ್ ಎ ಮಾದರಿಯ ತಾಲೂಕು ಆಡಳಿತ ಸೌಧ ಕಟ್ಟಡಗಳನ್ನು ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮೊದಲನೇ ಹಂತದಲ್ಲಿ ಜಿಲ್ಲೆಯ ಮಸ್ಕಿ ಹಾಗೂ ಸಿರವಾರ ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಾಣಕ್ಕಾಗಿ ತಲಾ 8.60 ಕೋಟಿ ಯೋಜನೆಗೆ ಅನುಮೋದನೆ ದೊರಕಿದೆ.
ಕಲ್ಯಾಣ ಕರ್ನಾಟಕದ ಪವಿತ್ರವಾದ ದಿನವಾಗಿದೆ. ಇಂತಹ ದಿನದಂದು ಸಚಿವ ಸಂಪುಟ ಸಭೆ ನಡೆಸಿ ರಾಜ್ಯ ಸರ್ಕಾರ ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಿದೆ. |ಎನ್.ಎಸ್ ಬೋಸರಾಜು, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
ರಾಯಚೂರು ಮಹಾನಗರ ಪಾಲಿಕೆ ಘೋಷಣೆಗೆ ಸೆನ್ಸಸ್ ಕಮಿಟಿಯ ಅನುಮತಿ ಬೇಕಾಗಿತ್ತು. ಇದೀಗ ಸರ್ಕಾರ ಮಹಾನಗರ ಪಾಲಿಕೆಯನ್ನಾಗಿ ಘೊಷಣೆ ಮಾಡಿದ್ದು, ರಾಯಚೂರಿನ ವಿಮಾನ ನಿಲ್ದಾಣ ಕಾಮಗಾರಿಯ ಬಗ್ಗೆ ಹಾಗೂ ಕೈಗಾರಿಕೆಗಳ ಮೂಲಕ ಉದ್ಯೋಗ ಸ್ಥಾಪನೆಗೂ ಪ್ರಸ್ತಾವನೆ ಕಳಿಸಲಾಗಿತ್ತು. | ಡಾ.ಶಿವರಾಜ್ ಪಾಟೀಲ್, ಶಾಸಕ, ರಾಯಚೂರು ನಗರ ವಿಧಾನಸಭಾ ಕ್ಷೇತ್ರ
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಸಮಿತಿ ರಚಿಸಿ, ಅಭಿವೃದ್ಧಿ ಹೊಂದಿದ ಜಿಲ್ಲೆಗಳೊಂದಿಗೆ ತುಲನೆ ಮಾಡಬೇಕಿದೆ. 371 ಜೆ ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಕೂಡ ಅಷ್ಟೆ ಮುಖ್ಯವಾಗಿದೆ. | ಅಶೋಕಕುಮಾರ್ ಜೈನ್, ಜಿಲ್ಲಾಧ್ಯಕ್ಷ, ಕರವೇ ರಾಯಚೂರು.