

Election Commission: ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತಗಳ್ಳತನ ನಡೆಯುತ್ತದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಸಂಬಂಧಿಸಿದಂತೆ ಇಂದು(ಆಗಸ್ಟ್ 17) ಚುನಾವಣಾ ಆಯೋಗ, ಮತಗಳ್ಳತನ ಎಂಬ ಅನುಚಿತ ಪದಗಳನ್ನು ಬಳಸುವುದು ಸಂವಿಧಾನವನ್ನು ಅವಮಾನಿಸಿದಂತೆ ಎಂದು ಹೇಳಿತು.
ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ ದೆಹಲಿಯಲ್ಲಿ ಮೂವರು ಭಾರತೀಯ ಚುನಾವಣಾ ಆಯೋದ ಆಯುಕ್ತರಾದ ಜ್ಞಾನೇಶ್ ಕುಮಾರ್, ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾತನಾಡಿ, ರಾಜಕೀಯ ಉದ್ದೇಶಗಳಿಗಾಗಿ ಭಾರತದ ಮತದಾರರನ್ನು ಗುರಿಯಾಗಿಸಲು ಚುನಾವಣಾ ಆಯೋಗವನ್ನು ಲಾಂಚ್ ಪ್ಯಾಡ್ನಂತೆ ಬಳಸಲಾಗುತ್ತದೆ. ಆಯೋಗ ಮತದಾರರೊಂದಿಗೆ ದೃಢವಾಗಿ ನಿಲ್ಲುತ್ತದೆ. ಚುನಾವಣಾ ಸಂಸ್ಥೆಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಮಗೆ ಎಲ್ಲಾ ಪಕ್ಷಗಳು ಒಂದೇ, ಆಯೋಗ ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಬಿಹಾರದಲ್ಲಿ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಾರಂಭಿಸಲಾಗಿದೆ. ಡೇಟಾಬೇಸ್ನಲ್ಲಿ ತಿದ್ದುಪಡಿಗಳಿಗಾಗಿ ರಾಜಕೀಯ ಪಕ್ಷಗಳ ಬೇಡಿಕೆಯನ್ನು ಪರಹರಿಸಲು ಇದನ್ನು ಆರಂಭಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವಿದೆ. ಚುನಾವಣಾ ಆಯೋಗದ ಬಾಗಿಲುಗಳು ಎಲ್ಲರಿಗೂ ಸಮಾನವಾಗಿ ತೆರೆದಿರುತ್ತವೆ. ಯಾವುದೇ ದೋಷಗಳನ್ನು ಗುರುತಿಸುವಂತೆ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.
ಡಿಜಿಟಲ್ ಮತದಾರರ ಪಟ್ಟಿ ಕೊಡಿ ಎಂಬ ವಿಪಕ್ಷಗಳ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ 2019ರಲ್ಲಿ ಇದು ಮತದಾರರ ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಹೇಳಿದೆ. ಕೆಲವು ದಿನಗಳ ಹಿಂದೆ ಹಲವಾರು ಮತದಾರರ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿರುವುದನ್ನು ನಾವು ನೋಡಿದ್ದೇವೆ. ಚುನಾವಣಾ ಸಂಸ್ಥೆಯು ಯಾವುದೇ ಮತದಾರರ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಬೇಕೇ?" ಎಂದು ಆಯುಕ್ತರು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಗಾಗಿ 1 ಕೋಟಿಗೂ ಹೆಚ್ಚು ಅಧಿಕಾರಿಗಳು, 10 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಏಜೆಂಟ್‌ಗಳು ಹಾಗೂ 20 ಲಕ್ಷಕ್ಕೂ ಹೆಚ್ಚು ಪೋಲಿಂಗ್ ಏಜೆಂಟ್‌ಗಳು ಕೆಲಸ ಮಾಡುತ್ತಾರೆ. ಇಷ್ಟೊಂದು ಜನರ ಮುಂದೆ ಪಾರದರ್ಶಕವಾಗಿ ಮತದಾನ ನಡೆಯುವಾಗ ಯಾರಾದರೂ ಮತಗಳನ್ನು ಕದಿಯಲು ಸಾಧ್ಯವೇ?, ಡಬಲ್ ವೋಟಿಂಗ್ ಬಗ್ಗೆ ಕೆಲವು ಆರೋಪಗಳನ್ನು ಮಾಡಲಾಗಿತ್ತು. ಆದರೆ ಬಗ್ಗೆ ತನಿಖೆ ನಡೆಸಿದಾಗ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ತಿಳಿಸಿದರು. (ಏಜೆನ್ಸೀಸ್)