

Rahul Gandhi: ಭಾರತದ ಚುನಾವಣೆಗಳಲ್ಲಿ ಬಿಜೆಪಿಗೊಸ್ಕರ ಚುನಾವಣಾ ಆಯೋಗ ಮತಗಳ್ಳತನದಲ್ಲಿ ತೊಡಗಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಇಂದು(ಆಗಸ್ಟ್ 17) ಬಿಹಾರದಲ್ಲಿ ಸಸಾರಾಮ್ನಿಂದ 1,300 ಕಿಮೀ ಉದ್ದದ ಮತದಾರ ಅಧಿಕಾರ ಯಾತ್ರೆಯನ್ನು ಆರಂಭಿಸಿದ್ದಾರೆ.
ಸಸಾರಾಮ್ನಲ್ಲಿ ಯಾತ್ರೆ ಆರಂಭಕ್ಕೂ ಸಾರ್ವಜನಿಕ ಸಭೆ ನಡೆಸಿದ ರಾಹುಲ್ ಗಾಂಧಿ, ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಸೇರಿ ಇಂಡಿಯಾ ಒಕ್ಕೂಟದ ಹಲವು ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಈ ಯಾತ್ರೆ ಬಿಹಾರದ 20 ಜಿಲ್ಲೆಗಳಲ್ಲಿ ನಡೆಯಲಿದೆ. ಇದು ಸಂವಿಧಾನವನ್ನು ಉಳಿಸುವ ಹೋರಾಟ. ಇಡೀ ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳನ್ನು ಕದಿಯಲಾಗುತ್ತಿದೆ. ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ವ್ಯಾಯಾಮದ ಮೂಲಕ ಮತದಾರರನ್ನು ಅಳಿಸಿವುದು ಮತ್ತು ಸೇರಿಸುವ ಮೂಲಕ ಮತಗಟ್ಟೆಗಳನ್ನು ಕದಿಯಲು ಹೊಸ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮತಕಳ್ಳತನದ ಬಗ್ಗೆ ನಾನು ಒತ್ತಡ ಹೇರಿದ ನಂತರ ಚುನಾವಣಾ ಆಯೋಗವು ಅಫಿಡವಿಟ್ ಸಲ್ಲಿಸಲು ನನ್ನನ್ನು ಕೇಳಿತು. ಆದರೆ ಬಿಜೆಪಿ ನಾಯಕರು ಹಕ್ಕು ಮಂಡಿಸಿದಾಗ ಅವರ ಅಫಿಡವಿಟ್ ಅನ್ನು ಆಯೋಗ ಕೇಳಲಿಲ್ಲ.ಬಿಹಾರದಲ್ಲಿ ಚುನಾವಣೆ ಕದಿಯಲು ನಾವು ಬಿಡುವುದಿಲ್ಲ. ಬಡವರಿಗೆ ಮಾತ್ರ ಅವರ ಮತದ ಅಧಿಕಾರವಿರುತ್ತದೆ. ಅದನ್ನು ಕಸಿದುಕೊಳ್ಳಲು ನಾವು ಬಿಡುವುದಿಲ್ಲ ಎಂದರು.
ರಾಹುಲ್ ಗಾಂಧಿಯ 'ಮತ ಅಧಿಕಾರ ಯಾತ್ರೆ'
ರಾಹುಲ್ ಗಾಂಧಿಯವರ 'ಮತದಾರ ಅಧಿಕಾರ ಯಾತ್ರೆ' ಬಿಹಾರದ 20 ಜಿಲ್ಲೆಗಳನ್ನು ಒಳಗೊಂಡಿದೆ. ಇದು ಔರಂಗಾಬಾದ್, ಗಯಾ, ನಾವಡಾ, ನಳಂದಾ, ಶೇಖ್‌ಪುರ, ಲಖಿಸಾರೈ, ಮುಂಗೇರ್, ಭಾಗಲ್‌ಪುರ್, ಕತಿಹಾರ್, ಪುರ್ನಿಯಾ, ಅರಾರಿಯಾ, ಸುಪೌಲ್, ಮಧುಬನಿ, ದರ್ಬಂಗಾ, ಸಿತಾಮರ್ಹಿ, ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಸಿವಾನ್, ಚಪ್ರಾ ಮತ್ತು ಅರಾ ಮೂಲಕ ಹಾದುಹೋಗುತ್ತದೆ. ಈ ಯಾತ್ರೆ ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ನಡೆಯುವ ರ್ಯಾಲಿಯೊಂದಿಗೆ ಮುಕ್ತಾಯವಾಗುತ್ತದೆ.
2024 ರ ಲೋಕಸಭಾ ಚುನಾವಣೆಗೆ ಮುನ್ನ ಶ್ರೀ ರಾಹುಲ್ ಗಾಂಧಿಯವರ ಮಣಿಪುರದಿಂದ ಮುಂಬೈಗೆ 'ಭಾರತ್ ಜೋಡೋ ನ್ಯಾಯ ಯಾತ್ರೆ'ಯಂತೆ ಇದನ್ನು ಕಾಲ್ನಡಿಗೆಯಲ್ಲಿ ಮತ್ತು ವಾಹನದ ಮೂಲಕ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. (ಏಜೆನ್ಸೀಸ್)