ವಯನಾಡು ಜತೆ ರಾಯ್​ಬರೇಲಿಯಿಂದಲೂ ರಾಹುಲ್​ ಸ್ಪರ್ಧೆ: ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Rahul Gandhi
Published on

ನವದೆಹಲಿ: ಇದುವರೆಗೂ ನಿಗೂಢವಾಗಿಯೇ ಉಳಿದಿದ್ದ ರಾಯ್​ಬರೇಲಿ ಮತ್ತು ಅಮೇಥಿ ಕ್ಷೇತ್ರಗಳಿಗೆ ಕೊನೆಗೂ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕೇರಳದ ವಯನಾಡು ಜತೆ ರಾಯ್​ಬರೇಲಿಯಿಂದಲೂ ರಾಹುಲ್ ಗಾಂಧಿ​ ಸ್ಪರ್ಧೆ ಮಾಡಲಿದ್ದಾರೆ. ಉಳಿದಂತೆ ಅಮೇಥಿಯಿಂದ ಕೆ.ಎಲ್​. ಶರ್ಮ ಅವರನ್ನು ಕಣಕ್ಕಿಳಿಸಲಾಗಿದೆ.

ರಾಹುಲ್​ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ರಾಯ್​ಬರೇಲಿಯಿಂದ ಕಣಕ್ಕಿಳಿದಿದ್ದಾರೆ. ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿದ್ದ ರಾಯ್​ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕೆ ಇಳಿಯುತ್ತಾರೆ ಎಂಬ ಚರ್ಚೆಯಾಗಿತ್ತು. ಆದರೆ, ಪ್ರಿಯಾಂಕಾ ಅವರು ಈ ಬಾರಿಯೂ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಪ್ರಿಯಾಂಕಾ ಸ್ಪರ್ಧೆಗೆ ಒತ್ತಾಯ ಮಾಡಿದ್ದ ಕಾರ್ಯಕರ್ತರಿಗೆ ಇದೀಗ ನಿರಾಸೆಯಾಗಿದೆ.

ತಡರಾತ್ರಿಯವರೆಗೂ ನಡೆದ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಮೇ 20ರಂದು ನಡೆಯುವ ಐದನೇ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಮತ್ತು ಕೆ.ಎಲ್​. ಶರ್ಮ ಇಂದು 12 ಗಂಟೆಗೆ ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ರಾಹುಲ್​ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆಲುವು ಸಾಧಿಸಿದರು. ಈ ಬಾರಿಯೂ ಇದೇ ಫಲಿತಾಂಶ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಅಮೇಥಿಯಿಂದ ತಾಯಿ ಸೋನಿಯಾ ಗಾಂಧಿ ಕ್ಷೇತ್ರ ರಾಯ್​ಬರೇಲಿಗೆ ರಾಹುಲ್​ ಗಾಂಧಿ ಸ್ಥಳಾಂತರಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net