More

    ಕಾಂಗ್ರೆಸ್​ನ ವೋಟ್ ಜಿಹಾದ್ ಬಹಿರಂಗ: ಇಂಡಿ ಮೈತ್ರಿಕೂಟದ ವಿರುದ್ಧ ಮೋದಿ ವಾಗ್ದಾಳಿ

    ಆನಂದ್(ಗುಜರಾತ್): ಇನ್​ಹೆರಿಟೆನ್ಸ್ ಟ್ಯಾಕ್ಸ್ ಮೂಲಕ ಜನರ ಆಸ್ತಿ ಕಸಿದುಕೊಳ್ಳುವ ಕಾಂಗ್ರೆಸ್​ನ ತಂತ್ರ ಬಹಿರಂಗವಾದ ಬೆನ್ನಲ್ಲೇ ಈಗ ಕಾಂಗ್ರೆಸ್​ನ ‘ವೋಟ್ ಜಿಹಾದ್’ ಕೂಡ ಬೆಳಕಿಗೆ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

    ಗುಜರಾತ್​ನ ಆನಂದ್​ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಗುರುವಾರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಸೋದರ ಸೊಸೆ, ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ ಖಾನ್ ವೋಟ್ ಜಿಹಾದ್​ಗೆ ಮನವಿ ಮಾಡಿದ್ದನ್ನು ಉಲ್ಲೇಖಿಸಿದರು. ಐಎನ್​ಡಿಐಎ ಮೈತ್ರಿಕೂಟದ ನಾಯಕಿ ವೋಟ್ ಜಿಹಾದ್​ಗೆ ಮನವಿ ಮಾಡಿದ್ದು ಕಳವಳಕಾರಿ. ಮತಕ್ಕಾಗಿ ಮುಸ್ಲಿಮರ ಏಕತೆಗೆ ವಿಪಕ್ಷ ಮನವಿ ಮಾಡಿಕೊಂಡಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅಪಮಾನ ಎಂದು ಮೋದಿ ಹೇಳಿದರು.

    ಮರಿಯಾ ಆಲಂ ಖಾನ್ ಐಎನ್​ಡಿಐಎ ಮೈತ್ರಿಕೂಟದ ತಂತ್ರವನ್ನು ದೇಶದ ಮುಂದೆ ಬಹಿರಂಗಪಡಿಸಿದ್ದಾರೆ. ಐಎನ್​ಡಿಐಎ ಮೈತ್ರಿಕೂಟ ಮುಸ್ಲಿಮರಲ್ಲಿ ವೋಟ್ ಜಿಹಾದ್ ಮಾಡುವಂತೆ ಕೋರಿದೆ. ಅಷ್ಟಕ್ಕೂ ಇಂಥ ಹೇಳಿಕೆ ಹೊರಬಂದಿರುವುದು ಸುಶಿಕ್ಷಿತ ಕುಟುಂಬದಿಂದಲೇ ಹೊರತು ಯಾವುದೇ ಮದರಸದ ಮಕ್ಕಳಿಂದ ಅಲ್ಲ. ಮುಸ್ಲಿಮರು ಒಟ್ಟಾಗಿ ಬಂದು ಮತ ಚಲಾಯಿಸಬೇಕು ಎಂದು ಐಎನ್​ಡಿಐಎ ಮೈತ್ರಿಕೂಟ ಮನವಿ ಮಾಡಿಕೊಳ್ಳುತ್ತಿದೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.

    ಸಾಯುತ್ತಿರುವ ಕೈಗೆ ಪಾಕ್ ಪ್ರಾರ್ಥನೆ: ದುರ್ಬಲ ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆಯ ಪರಿಣತರಿಗೆ ದಾಖಲೆಗಳನ್ನು ನೀಡುತ್ತಿತ್ತು. ಆದರೆ ಮೋದಿ ಸರ್ಕಾರ ಉಗ್ರರನ್ನು ಅವರ ನೆಲದಲ್ಲೇ ಕೊಲ್ಲುತ್ತಿದೆ. ಇಂದು ದೇಶದಲ್ಲಿ ಕಾಂಗ್ರೆಸ್ ದುರ್ಬಲಗೊಳ್ಳುತ್ತಿದ್ದು, ಇಲ್ಲಿ ಕಾಂಗ್ರೆಸ್ ಸಾಯುತ್ತಿದ್ದರೆ, ಅಲ್ಲಿ ಪಾಕಿಸ್ತಾನ ಅಳುತ್ತಿದೆ. ಭಾರತದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಅಲ್ಲಿ ಪಾಕಿಸ್ತಾನ ಪ್ರಾರ್ಥನೆ ಮಾಡಿಕೊಳ್ಳುತ್ತಿದೆ. ಯುವರಾಜನನ್ನು ಪ್ರಧಾನಿ ಮಾಡಲು ಪಾಕ್ ನಾಯಕರು ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಪಾಕಿಸ್ತಾನದ ಹಿಂಬಾಲಕ ಪಕ್ಷ, ಪಾಕಿಸ್ತಾನ ಮತ್ತು ಕಾಂಗ್ರೆಸ್ ನಡುವಿನ ಪಾಲುದಾರಿಕೆ ಈಗಾಗಲೇ ಬಹಿರಂಗಗೊಂಡಿದೆ ಎಂದು ಮೋದಿ ವಿವರಿಸಿದರು.

    ನರ್ತಿಸಿದರೆ ಕೆಲಸ ಆಗಲ್ಲ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ಸಂವಿಧಾನವನ್ನು ತಲೆ ಮೇಲಿಟ್ಟುಕೊಂಡಂತೆ ನರ್ತಿಸಿದರೆ ಕೆಲಸ ಆಗುವುದಿಲ್ಲ ಎಂದು ವಾಕ್​ಪ್ರಹಾರ ನಡೆಸಿ ದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವರಾಜ (ರಾಹುಲ್ ಗಾಂಧಿ) ಸಂವಿಧಾನವನ್ನು ತಲೆ ಮೇಲೆ ಇಟ್ಟುಕೊಂಡು ನರ್ತಿಸುತ್ತಿದ್ದಾರೆ. ಈಗ ತಲೆ ಮೇಲಿಟ್ಟುಕೊಂಡು ನರ್ತಿಸುತ್ತಿರುವ ಅದೇ ಸಂವಿಧಾನವನ್ನು 75 ವರ್ಷಗಳಲ್ಲಿ ದೇಶದ ಎಲ್ಲ ಕಡೆ ಏಕೆ ಅನುಷ್ಠಾನಗೊಳಿಸಲಿಲ್ಲ ಎಂದು ಮೋದಿ ಪ್ರಶ್ನಿಸಿದ್ದಾರೆ. 370ನೇ ವಿಧಿ ರದ್ದುಗೊಳಿಸಿದ್ದನ್ನು ಪ್ರಸ್ತಾಪಿಸಿದ ಮೋದಿ, ತಾವು ಪ್ರಧಾನಿ ಆಗುವುದಕ್ಕೂ ಮೊದಲು ದೇಶದಲ್ಲಿ 2 ಧ್ವಜ, 2 ಸಂವಿಧಾನಗಳಿದ್ದವು. ರಾಜಕುಮಾರನ ಕುಟುಂಬ ದೇಶದ ಎಲ್ಲ ಕಡೆ ಸಂವಿಧಾನ ಅನುಷ್ಠಾನಗೊಳಿಸಲು ಬಿಟ್ಟಿರಲಿಲ್ಲ. ದೇಶದ ಸಂವಿಧಾನ ಕಾಶ್ಮೀರದಲ್ಲಿ ಅನ್ವಯಿಸುತ್ತಿರಲಿಲ್ಲ. ಅಡ್ಡಗೋಡೆಯಂತಿದ್ದ 370ನೇ ವಿಧಿ ರದ್ದುಪಡಿಸಿದೆ ಎಂದರು.

    ಕಾಂಗ್ರೆಸ್-ಬಿಜೆಪಿ ಆಡಳಿತ ತುಲನೆ: ಕಾಂಗ್ರೆಸ್​ನ 60 ವರ್ಷಗಳ ಆಡಳಿತದಲ್ಲಿ ಗ್ರಾಮೀಣ ಪ್ರದೇಶದ ಶೇ.60 ಜನರಿಗೆ ಶೌಚಗೃಹವೇ ಇರಲಿಲ್ಲ. ಆದರೆ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಶೇ.100 ಶೌಚಗೃಹಗಳನ್ನು ನಿರ್ವಿುಸಿದೆ. ಕಾಂಗ್ರೆಸ್ ತನ್ನ 6 ದಶಕಗಳ ಆಡಳಿತದಲ್ಲಿ ದೇಶದ ಗ್ರಾಮೀಣ ಪ್ರದೇಶದ ಶೇ. 20 ಅಂದರೆ 3 ಕೋಟಿ ಮನೆಗಳಿಗಷ್ಟೇ ನಲ್ಲಿ ನೀರು ಸಂಪರ್ಕ ನೀಡಿತ್ತು. ಆದರೆ ಈಗ ನಲ್ಲಿ ನೀರು ಸಂಪರ್ಕ ಪಡೆದ ಮನೆಗಳ ಸಂಖ್ಯೆ 14 ಕೋಟಿಗೆ ಏರಿದ್ದು, ಶೇ. 75 ಮನೆಗಳಿಗೆ ನೀರಿನ ಸಂಪರ್ಕ ಲಭಿಸಿದೆ. ಬಡವರ ಹೆಸರಿನಲ್ಲಿ ಬ್ಯಾಂಕ್​ಗಳನ್ನು ರಾಷ್ಟ್ರೀಕರಣ ಗೊಳಿಸಿದ್ದ ಕಾಂಗ್ರೆಸ್, ಬಡವರಿಗೆ ಖಾತೆ ಮಾಡಿಸಿಕೊಡಲಿಲ್ಲ. ಆದರೆ ತಾವು ಹತ್ತೇ ವರ್ಷ ಗಳಲ್ಲಿ 50 ಕೋಟಿ ಜನಧನ ಬ್ಯಾಂಕ್ ಖಾತೆಗಳನ್ನು ಮಾಡಿಕೊಟ್ಟಿದ್ದಾಗಿ ಮೋದಿ ಹೇಳಿದರು.

    3 ಗ್ಯಾರಂಟಿಯ ಸವಾಲು: ಕಾಂಗ್ರೆಸ್​ನ ಮುಸ್ಲಿಂ ತುಷ್ಟೀಕರಣದ ವಿರುದ್ಧ ಕಿಡಿಕಾರಿದ ಮೋದಿ, ದೇಶಕ್ಕೆ ಮೂರು ಗ್ಯಾರಂಟಿ ಬರೆದುಕೊಡಿ ಎಂದು ಕಾಂಗ್ರೆಸ್​ನವರಿಗೆ ಸವಾಲೆ ಸೆದರು. ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಿ ಮುಸ್ಲಿಮರಿಗೆ ಮೀಸಲಾತಿ ಹಂಚುವುದಿಲ್ಲ, ದೇಶವನ್ನು ವಿಭಜಿಸುವುದಿಲ್ಲ, ಎಸ್​ಸಿ-ಎಸ್​ಟಿಗಳ ಮೀಸಲಾತಿ ಹಕ್ಕು ಕಿತ್ತುಕೊಳ್ಳುವುದಿಲ್ಲ ಎಂದು ಬರೆದುಕೊಡಿ ಎಂದು ಮೋದಿ ಕಾಂಗ್ರೆಸ್​ನವರನ್ನು ಉದ್ದೇಶಿಸಿ ಹೇಳಿದರು.

    ನಕಲಿ ಸರಕುಗಳ ಕಾರ್ಖಾನೆ: ಕಾಂಗ್ರೆಸ್ ತನ್ನನ್ನು ಮೊಹಬ್ಬತ್ ಕೀ ದುಖಾನ್ (ಪ್ರೀತಿಯ ಅಂಗಡಿ) ಎಂದು ಕರೆದುಕೊಳ್ಳುತ್ತ ಸುಳ್ಳು ಹೇಳುತ್ತಿದೆ. ಅದು ಕ್ರಮೇಣ ‘ನಕಲಿ ಸರಕುಗಳ ಕಾರ್ಖಾನೆ’ ಆಗಿದೆ ಎಂದೂ ಮೋದಿ ವಾಗ್ದಾಳಿ ನಡೆಸಿದರು. ಸರ್ದಾರ್ ಪಟೇಲ್ ಅವರ ದೇಶ ಒಗ್ಗೂಡಿಸುವ ಕನಸನ್ನು ಇಂದು ಮೋದಿ ಸಾಕಾರಗೊಳಿಸುತ್ತಿದ್ದರೆ, ಕಾಂಗ್ರೆಸ್ ಈಗ ದೇಶ ವಿಭಜನೆ ಮಾಡುವುದರಲ್ಲಿ ತೊಡಗಿಸಿಕೊಂಡಿದೆ. ಕಾಂಗ್ರೆಸ್ ಸಮಾಜದಲ್ಲಿ ಜಗಳ ಸೃಷ್ಟಿಸಲು ಬಯಸುತ್ತಿದೆ ಎಂದ ಮೋದಿ, ಯುಪಿಎ ಸರ್ಕಾರದ ಅವಧಿಯನ್ನು ಆಡಳಿತಾವಧಿ, ಬಿಜೆಪಿಯದ್ದು ಸೇವಾವಧಿ ಎಂದರು.

    ಹಿಂದುಗಳ ಭಾವನೆಗೆ ಖರ್ಗೆ ಹೇಳಿಕೆ ಧಕ್ಕೆ

    ಲಖನೌ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂದುಗಳ ಭಾವನೆಗೆ ನೋವು ಉಂಟುಮಾಡಿದ್ದಾರೆ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅವಹೇಳನಕಾರಿ ಹೇಳಿಕೆಗಳೇ ಪಕ್ಷದ ಅವನತಿಯ ಆರಂಭ. ಕಾಂಗ್ರೆಸ್ ಇತಿಹಾಸವೇ ಇಂಥವುಗಳಿಂದ ತುಂಬಿದೆ. ಚುನಾವಣಾ ಸಮಯದಲ್ಲಿ ಈ ನಡವಳಿಕೆಗಳು ಎದ್ದು ಕಾಣುತ್ತವೆ. ಚುನಾವಣೆ ವೇಳೆ ಈ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಭಾರತದ ನಂಬಿಕೆಗಳನ್ನು ಅಗೌರವಿಸುವ ಜತೆಗೆ ಬಹುಸಂಖ್ಯಾತರ ಭಾವನೆಗಳನ್ನು ನೋಯಿಸಲಾಗುತ್ತಿದೆ ಎಂದು ಯೋಗಿ ಕಿಡಿಕಾರಿದ್ದಾರೆ. ಛತ್ತೀಸ್​ಗಢದಲ್ಲಿ ಮಂಗಳವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ್ ದಹರಿಯಾ ಪರ ಪ್ರಚಾರ ನಡೆಸಿದ್ದ ಖರ್ಗೆ, ದಹರಿಯಾ ರಾಮನ ವಿರುದ್ಧವೂ ಸ್ಪರ್ಧಿಸಬಹುದು. ಏಕೆಂದರೆ ಅವರು ಶಿವ, ನನ್ನ ಹೆಸರು ಮಲ್ಲಿಕಾರ್ಜುನ, ಅಂದರೆ ಶಿವ ಎಂದೇ ಅರ್ಥ ಎಂಬುದಾಗಿ ಹೇಳಿದ್ದರು. ಇದು ವಿವಾದಾತ್ಮಕವಾಗಿ ಪರಿಣಮಿಸಿ, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

     

     

    ಬಿರು ಬಿಸಿಲಿಗೆ ಕಾದು ಕೆಂಡದಂತಾಗಿದ್ದ ರಾಜಧಾನಿಗೆ ತಂಪೆರೆದ ಮಳೆರಾಯ: ಬೆಂಗಳೂರು ಮಂದಿ ಫುಲ್​ ಖುಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts