

ನವದೆಹಲಿ: ದೆಹಲಿಯಲ್ಲಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಮನೆಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಈ ಸಂದರ್ಭದ ವಿಡಿಯೋವೊಂದು ಸೋಶಿಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ರಾಹುಲ್ ಗಾಂಧಿ, ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಟನ್ ಅಡುಗೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಲಾಲು ಅವರ ಮನೆಯಲ್ಲಿ ಅಡುಗೆ ಮಾಡಿದ್ದಾರೆ. ಲಾಲು ಜತೆಗೆ ರಾಹುಲ್ ಗಾಂಧಿ ಅವರು, ಮಟನ್ ಪೀಸ್‌ಗೆ ಮಸಾಲೆ, ಉಪ್ಪು, ಮೆಣಸು ಮತ್ತು ಅರಿಶಿನವನ್ನು ಬೆರೆಸಿ ಸ್ಪೆಷಲ್ ಚಂಪಾರಣ್ ಮಟನ್ ತಯಾರಿಸಿದ್ದಾರೆ.
ಮೊದಲ ಬಾರಿಗೆ ಸ್ಪೆಷಲ್ ಚಂಪಾರಣ್ ಮಟನ್ ಅಡುಗೆ ಮಾಡಿದ ರಾಹುಲ್, ಲಾಲು ಜೊತೆ ಊಟ ಮಾಡಿ ರಾಜಕೀಯ ಚರ್ಚೆ ನಡೆಸಿದರು. ರಾಹುಲ್ ಕುರಿ ಮಾಂಸ ಬೇಯಿಸುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಲಾಲು ಮತ್ತು ಮೀಸಭಾರತಿ ಅವರ ಸಲಹೆ ಮೇರೆಗೆ ಮಟನ್ ಕರಿ ಬೇಯಿಸಿದ್ದೇನೆ ಎಂದು ರಾಹುಲ್ ವಿಡಿಯೋದಲ್ಲಿ ಹೇಳಿದ್ದಾರೆ. ನಿಮ್ಮ ತಂದೆ-ತಾಯಿ, ಅಜ್ಜಿಯರು ದೇಶವನ್ನು ಸರಿದಾರಿಯಲ್ಲಿ ಕೊಂಡೊಯ್ದಿದ್ದಾರೆ ಎಂಬುದನ್ನು ಇಂದಿನ ಪೀಳಿಗೆ ಮರೆಯಬಾರದು ಎಂದು ಲಾಲು ಪ್ರಸಾದ್ ಯಾದವ್ ರಾಹುಲ್ ಗಾಂಧಿ ಬಳಿ ಹೇಳಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಅವರು ಬೆಂಗಾಲಿ ಮಾರುಕಟ್ಟೆ, ಜಾಮಾ ಮಸೀದಿ, ಮುಖರ್ಜಿ ನಗರ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಜನರೊಂದಿಗೆ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ರಾಹುಲ್ ಹರಿಯಾಣದ ಮುರ್ತಾಲ್‌ನಿಂದ ಅಂಬಾಲಾಗೆ ಟ್ರಕ್‌ನಲ್ಲಿ ಪ್ರಯಾಣಿಸಿದರು. ಕರೋಲ್‌ಬಾಗ್‌ನಲ್ಲಿರುವ ಬೈಕ್ ಮಾರುಕಟ್ಟೆ ಮತ್ತು ಆಜಾದ್‌ಪುರದ ತರಕಾರಿ ಮಾರುಕಟ್ಟೆಯನ್ನೂ ರಾಹುಲ್ ಗಾಂಧಿ ಭೇಟಿ ನೀಡಿ ಜನಸಾಮಾನ್ಯರೊಂದಿಗೆ ಚರ್ಚೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.