ತನ್ನ ವಿರುದ್ಧದ ಟೀಕೆಗಳನ್ನು ತೆಗೆದುಹಾಕಿ; ಸ್ಪೀಕರ್ ಓಂ ಬಿರ್ಲಾರ ಬಳಿ ರಾಹುಲ್​ ಗಾಂಧಿ ಮನವಿ | Rahul Gandhi

Untitled design - 2024-12-11T143835.620
Published on

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಗದ್ದಲ ಮುಂದುವರಿದಿದೆ. ಈ ನಡುವೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿರುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಬುಧವಾರ(ಡಿಸೆಂಬರ್​​​ 11) ತಿಳಿಸಿದರು.

ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಲೋಕಸಭೆಯಲ್ಲಿ ಬಿಜೆಪಿ ಸಂಸದರು ತಮ್ಮ ವಿರುದ್ಧ ಮಾಡಿರುವ ಟೀಕೆಗಳನ್ನು ತೆಗೆದುಹಾಕುವಂತೆ ಕೇಳಿರುವುದಾಗಿ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಹೇಳಿದರು. ಲೋಕಸಭೆಯ ಕಲಾಪಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಸ್ಪೀಕರ್‌ಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ನಾನು ಈಗಷ್ಟೇ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ವಿರುದ್ಧದ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಕಲಾಪದಿಂದ ತೆಗೆದುಹಾಕಬೇಕು ಎಂದು ನಮ್ಮ ಪಕ್ಷ ಬಯಸುತ್ತದೆ ಎಂದು ಹೇಳಿದ್ದೇನೆ. ಸ್ಪೀಕರ್ ಅದನ್ನು ಪರಿಶೀಲಿಸುವುದಾಗಿ ಹೇಳಿದರು. ಅವರು (ಬಿಜೆಪಿ ಜನರು) ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ, ಆದರೆ ನಾವು ಸದನವನ್ನು ಸರಿಯಾಗಿ ಕಾರ್ಯನಿರ್ವಹಿಸಲು ಅನುಮತಿಸಲು ನಿರ್ಧರಿಸಿದ್ದೇವೆ ಎಂದರು.

ಅವರು ಏನೇ ಪ್ರಚೋದನಕಾರಿ ಮಾತುಗಳನ್ನಾಡಿದರೂ ಅದನ್ನು ಹೇಳಲು ಬಿಡುತ್ತೇವೆ. ಆದರೆ ಸದನದ ಕಲಾಪಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನಿಸುತ್ತೇವೆ. ಸದನದ ಕಲಾಪಗಳು ಹೇಗೋ ಮುಂದುವರೆಯಲಿ, ಡಿಸೆಂಬರ್ 13 ರಂದು ಸಂವಿಧಾನವನ್ನು ಚರ್ಚಿಸಬೇಕು ಎಂದು ನಾವು ಬಯಸುತ್ತೇವೆ.

ಅದಾನಿ ವಿಚಾರದಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ನಾಯಕರು ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಇಂತಹ ಆರೋಪಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಡಿಸೆಂಬರ್ 13 ರಂದು ಲೋಕಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಯಬೇಕೆಂದು ತಮ್ಮ ಪಕ್ಷ ಬಯಸುತ್ತದೆ ಮತ್ತು ಅದು ತನ್ನ ಜವಾಬ್ದಾರಿಯಲ್ಲದಿದ್ದರೂ ಸದನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಇನ್ನು ರಾಜ್ಯಸಭೆಯಲ್ಲಿ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯದ ನೋಟಿಸ್ ಮಂಡಿಸಿವೆ. ನೋಟಿಸ್‌ನಲ್ಲಿ 60 ಸಂಸದರ ಸಹಿ ಇದೆ. ಇವುಗಳಲ್ಲಿ ಕಾಂಗ್ರೆಸ್, ಟಿಎಂಸಿ, ಎಸ್​​ಪಿ ಸಂಸದರ ಹೆಸರುಗಳೂ ಸೇರಿವೆ. ನೋಟಿಸ್‌ನಲ್ಲಿ ಧಂಖರ್ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದಾರೆ. ರಾಜ್ಯಸಭೆಯ 72 ವರ್ಷಗಳ ಸಂಸದೀಯ ಇತಿಹಾಸದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಇದೇ ಮೊದಲು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net