

ಚೆನ್ನೈ: ಪಂಚರಾಜ್ಯಗಳ ಚುನಾವಣೆ ಘೋಷಣೆಯಾದಾಗಿನಿಂದ ಅಥವಾ ಅದಕ್ಕೂ ಕೆಲ ದಿನಗಳ ಮೊದಲಿನಿಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಭರ್ಜರಿ ಹವಾ ಸೃಷ್ಟಿ ಮಾಡಿದ್ದಾರೆ.
ಮೊನ್ನೆಯಷ್ಟೇ ಕೇರಳದಲ್ಲಿ ಮೀನುಗಾರರ ಜೊತೆ ಬೋಟ್ನಲ್ಲಿ ಹೋಗುವಾಗ ಆಳಸಮುದ್ರಕ್ಕೆ ಜಿಗಿದು ಈಜಾಡಿದ್ದರು. ಇದು ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಈಗ ತಮಿಳುನಾಡು ಪ್ರವಾಸದಲ್ಲಿರುವ ಅವರು ಅಲ್ಲಿನ ಶಾಲಾ ಮಕ್ಕಳ ಜೊತೆ ಡ್ಯಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ತಮಿಳುನಾಡಿನ ಮುಳುಗುಮೂಡಿನ ಸೇಂಟ್ ಜೋಸೆಪ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ವಿದ್ಯಾರ್ಥಿನಿಯರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರಿಗೆ ಪಕ್ಷದ ದಿನೇಶ್ ಗುಂಡೂರಾವ್ ಸೇರಿದಂತೆ ಅಲ್ಲಿ ಕಾಂಗ್ರೆಸ್ ಮುಖಂಡರು ಜೊತೆಗೂಡಿದ್ದಾರೆ. ರಾಹುಲ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಕನ್ಯಾಕುಮಾರಿಯಲ್ಲಿ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ, ರಾಹುಲ್ ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಕಿಡಿಕಾರಿದರು. ಪ್ರಧಾನಿ ಮೋದಿ ಮುಂದೆ ಕೈ ಕಟ್ಟಿ ನಿಲ್ಲುವ ಈ ಮುಖ್ಯಮಂತ್ರಿ ತಮಿಳುನಾಡಿನ ಜನರ ಪ್ರತಿನಿಧಿಯಾಗುವುದಿಲ್ಲ ಎಂದು ಹರಿಹಾಯ್ದಿದ್ದಾರೆ. ಏಪ್ರೀಲ್ 6 ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ.