ರಾಹುಲ್ ಗಾಂಧಿ ಯಾರೋ ಬರೆದು ಕೊಟ್ಟದ್ದನ್ನು ಓದ್ತಾರೆ ಅಷ್ಟೆ... ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯ

Rahul
Published on

ಬೆಂಗಳೂರು: ರಾಹುಲ್ ಗಾಂಧಿ ಪಾಪ, ಅವರಿಗೆ ಏನೂ ತಿಳಿಯುವುದಿಲ್ಲ. ಯಾರೋ ಬರೆದು ಕೊಟ್ಟದ್ದನ್ನು ಓದ್ತಾರೆ. ಬೆಲೆ ಏರಿಕೆ, ಹಣದುಬ್ಬರ ಅವರ ಕಾಲದಲ್ಲಿ ಅಂದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಹೇಗಿತ್ತು? ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಂಗ್ಯವಾಡಿದರು.

ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಯುಪಿಎ ಆಡಳಿತಾವಧಿಯಲ್ಲಿ ಹಣದುಬ್ಬರ ಡಬಲ್ ಡಿಜಿಟ್ ದಾಟಿತ್ತು. ಬೆಲೆ ಏರಿಕೆ ನಿಯಂತ್ರಣ ತಪ್ಪಿತ್ತು. ಇದನ್ನೆಲ್ಲ ರಾಹುಲ್ ಗಾಂಧಿ ಜತೆಗಿರುವವರು ಹೇಳಬೇಕು. ಇಲ್ಲ ನೀವು(ಮಾಧ್ಯಮದವರು) ತಿಳಿಸಿಕೊಟ್ಟರೆ ಗೊತ್ತಾಗಬಹುದು ಎಂದರು.

ಕರೊನಾ ಹೊಡೆತದಿಂದ ಚೇತರಿಕೆಗೆ ಮುನ್ನವೇ ಯೂಕ್ರೇನ್ ಯುದ್ಧ ಅಪ್ಪಳಿಸಿತು. ಜಾಗತಿಕವಾಗಿ ಅನೇಕ ಬದಲಾಣೆಗಳಾಗಿವೆ. ಶಕ್ತಿಶಾಲಿ, ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕವಾಗಿ ತತ್ತರಿಸಿವೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಪ್ರಯತ್ನ, ಕ್ರಮಗಳಿಂದ ಬೆಲೆ ಏರಿಕೆ ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದು, ಈ‌ ಬಿಸಿ ತಾಗಬಾರದು ಎಂದು ಬಡವರಿಗೆ ಕಳೆದ‌ 27 ತಿಂಗಳಿಂದ ಉಚಿತ ಆಹಾರಧಾನ್ಯ ವಿತರಣೆ ವ್ಯವಸ್ಥೆ ಮಾಡಿದ್ದಾರೆ ಎಂದು ಪ್ರಲ್ಹಾದ್​ ಜೋಶಿ ಸಮರ್ಥಿಸಿಕೊಂಡರು.

ದೀಪಾವಳಿ ನಂತರ ದೆಹಲಿಗೆ ಬೊಮ್ಮಾಯಿ‌: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ದೀಪಾವಳಿ ಹಬ್ಬದ ನಂತರ ದೆಹಲಿಗೆ‌ ಬರುವುದಾಗಿ‌ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು. ಜತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ತಿಳಿಸುತ್ತೇವೆ ಎಂದು ಪ್ರಲ್ಹಾದ್ ಜೋಶಿ‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net