"ಮೊದಲು ಮಣಿಪುರ ನಂತರ ಹರಿಯಾಣ, ನೀವು ದೇಶ ಸುಡಲು ಯತ್ನಿಸುತ್ತಿದ್ದೀರಿ": ಪ್ರಧಾನಿ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

Rahul Gandhi Narendra Modi
Published on

ನವದೆಹಲಿ: ಬಿಜೆಪಿಯು ಮಣಿಪುರದಲ್ಲಿ ಭಾರತವನ್ನು ಕೊಲೆ ಮಾಡುತ್ತಿದ್ದು ಇದೀಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುವಾಗ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಕೆಳಮನೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, "ಭಾರತವು ಹೃದಯದ ಧ್ವನಿ, ನೀವು ಮಣಿಪುರದಲ್ಲಿ ಆ ಧ್ವನಿಯನ್ನು ಕೊಂದಿದ್ದೀರಿ. ನೀವು ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದೀರಿ. ನೀವು ದೇಶದ್ರೋಹಿಗಳು, ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ಇನ್ನೊಬ್ಬ ತಾಯಿ, ಭಾರತ ಮಾತಾ, ನೀವು ಅವಳನ್ನು ಮಣಿಪುರದಲ್ಲಿ ಕೊಂದಿದ್ದೀರಿ, ಅದಕ್ಕಾಗಿಯೇ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡುವುದಿಲ್ಲ. ನೀವು ಭಾರತ ಮಾತೆಯ ರಕ್ಷಕರಲ್ಲ, ನೀವು ಅವಳ ಕೊಲೆಗಾರರು" ಎಂದು ಹೇಳಿದ್ದಾರೆ.

"ಪ್ರಧಾನಿ ಅವರು ಮಣಿಪುರಕ್ಕೆ ಹೋಗಿಲ್ಲ ಏಕೆಂದರೆ ಅವರು ಅದನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ. ನೀವು (ಬಿಜೆಪಿ) ಮಣಿಪುರವನ್ನು ವಿಭಜಿಸಿದ್ದೀರಿ" ಎಂದು ಟ್ರೆಶರಿ ಪೀಠಗಳಿಂದ ಜೋರಾದ ಧ್ವನಿಯಲ್ಲಿ ವ್ಯಕ್ತವಾಗುತ್ತಿದ್ದ ಪ್ರತಿಭಟನೆಯ ನಡುವೆ ರಾಹುಲ್​ ಗಾಂಧಿ ಹೇಳಿದರು. ಸೇನೆಯನ್ನು ಕರೆಸುವ ಮೂಲಕ ಮಣಿಪುರದಲ್ಲಿ ಹಿಂಸಾಚಾರವನ್ನು ಕೇಂದ್ರವು ತಡೆಯಬಹುದು, ಆದರೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ರಾಮಾಯಣವನ್ನು ಉಲ್ಲೇಖಿಸಿ ಮಾತನಾಡಿದ ರಾಹುಲ್ ಗಾಂಧಿ, ರಾವಣನನ್ನು ರಾಮನು ಕೊಲ್ಲಲಿಲ್ಲ. ಆದರೆ ರಾವಣ ತನ್ನ ದುರಹಂಕಾರದಿಂದ ಕೊಲ್ಲಲ್ಪಟ್ಟನು" ಎಂದು ಹೇಳಿದರು. "ನೀವು ಎಲ್ಲೆಡೆ ಸೀಮೆಎಣ್ಣೆ ಎರಚಿದ್ದೀರಿ, ನೀವು ಮಣಿಪುರಕ್ಕೆ ಬೆಂಕಿ ಹಚ್ಚಿದ್ದೀರಿ. ನೀವು ಈಗ ಹರಿಯಾಣದಲ್ಲಿ ಅದೇ ಪ್ರಯತ್ನ ಮಾಡುತ್ತಿದ್ದೀರಿ" ಎಂದು ಇತ್ತೀಚೆಗೆ ಗುರುಗ್ರಾಮ್ ಮತ್ತು ನುಹ್‌ನಲ್ಲಿ ಆರು ಜನರನ್ನು ಕೊಂದ ಕೋಮು ಘರ್ಷಣೆಯನ್ನು ಉಲ್ಲೇಖಿಸಿ ಅವರು ಹೇಳಿದರು.

ಈ ಹೇಳಿಕೆಯು ಸದನದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ಹಿರಿಯ ಸಚಿವರುಗಳು ರಾಹುಲ್​ ಗಾಂಧಿ ಕ್ಷಮೆ ಯಾಚನೆ ಮಾಡುವಂತೆ ಒತ್ತಾಯಿಸಿದರು.

ಈ ಹಿಂದೆ, ರಾಹುಲ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದವರೆಗೆ ಭಾರತ್ ಜೋಡೋ ಯಾತ್ರೆಗೆ ಹೊರಟಾಗ, ಅವರ ಫಿಟ್ನೆಸ್ ಬಗ್ಗೆ ಅವರಿಗೆ ವಿಶ್ವಾಸವಿದ್ದು ಯಾತ್ರೆ ಕಷ್ಟಕರವಾಗಿರುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು. ಆದರೆ ಈ ದೇಶವು ದುರಹಂಕಾರವನ್ನು ಸಹಿಸುವುದಿಲ್ಲ. ಕೆಲವೇ ದಿನಗಳಲ್ಲಿ, ಹಳೆಯ ನೋವೊಂದು ಮರುಕಳಿಸಿತು. ನಾನು ಆ ನೋವು ಅನುಭವಿಸಿದೆ" ಎಂದು ಅವರು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net