ಪೋಷಕರನ್ನು ನೆನೆದು ಕಣ್ಣೀರು ಹಾಕಿದರಂತೆ ರಾಗಿಣಿ

Ragini New - Final
Published on

ಡ್ರಗ್ಸ್​ ವಿಷಯದಲ್ಲಿ ನಟಿ ರಾಗಿಣಿ ಅವರನ್ನು ಗುರುವಾರ ರಾತ್ರರ ಬಂಧಿಸಿರುವ ಸಿಸಿಬಿ ಪೊಲೀಸರು, ನಂತರ ಬೌರಿಂಗ್​ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಆ ನಂತರ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಈ ಸಂದರ್ಭದಲ್ಲಿ ರಾಗಿಣಿ ಅವರು ತಮ್ಮ ಪೋಷಕರನ್ನು ನೆನೆದು ಭಾವುಕರಾಗಿದ್ದರು ಎಂದು ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ ಅವರಿಗೆ ಪ್ರತ್ಯೇಕ ಕೊಠಡಿ ನೀಡಲಾಗಿತ್ತಂತೆ. ಮೂರು ಜನರಿರುವ ಈ ಕೊಠಡಿಯಲ್ಲಿ ರಾಗಿಣಿ ಜತೆಗೆ ಇಬ್ಬರು ಮಹಿಳಾ ಪೊಲೀಸ್​ ಅಧಿಕಾರಿಗಳಿಗೂ ಕೊಠಡಿಯಲ್ಲಿ ವಾಸ್ತವ್ಯ ನೀಡಲಾಗಿತ್ತು ಎಂದು ಹೇಳಲಾಗಿದೆ.

ನಿನ್ನೆ ತಡರಾತ್ರಿ ಸಾಂತ್ವನ ಕೇಂದ್ರಕ್ಕೆ ಬಂದ ನಂತರ, ರಾಗಿಣಿ ತಮ್ಮ ಪೋಷಕರನ್ನು ನೆನೆದು ಭಾವುಕರಾಗಿದ್ದಲ್ಲದೆ ಕೆಲ ಕಾಲ ಕಣ್ಣೀರು ಹಾಕಿದರು ಎಂದು ಹೇಳಲಾಗುತ್ತಿದೆ. ಇನ್ನು ಬೆಳಿಗ್ಗೆ ಕಾಫಿ ಕುಡಿದ ಅವರು, ಸ್ವಲ್ಪ ಚಿತ್ರಾನ್ನ ತಿಂದಿದ್ದಾರೆ. ಯಾಕೋ ತಮಗೆ ಹೊಟ್ಟೆ ಹಸಿವಿಲ್ಲ ಎಂದು ಸ್ವಲ್ಪ ತಿಂಡಿ ಮಾತ್ರ ಸೇವಿಸಿದ್ದಾರೆ ಎಂದು ಹೇಳಲಾಗಿದೆ.

ಡ್ರಗ್ಸ್​ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್​ನನ್ನು ಬುಧವಾರ ಬಂಧಿಸಿದ್ದ ಪೊಲೀಸರು ಆತನನ್ನು ಸಾಕಷ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಗುರುವಾರ ಬೆಳಿಗ್ಗೆ ಯಲಹಂಕದ ಜ್ಯುಡಿಷಿನಲ್‌ ಲೇಔಟ್​ನಲ್ಲಿರುವ ರಾಗಿಣಿಯವರ ಅಪಾರ್ಟ್ಮೆಂಟ್​ಗೆ ಸರ್ಚ್​​ ವಾರೆಂಟ್​ನೊಂದಿಗೆ ತೆರಳಿ ಶೋಧಕಾರ್ಯ ನಡೆಸಿದ್ದರು. ಆ ನಂತರ ಅವರನ್ನು ಸಿಸಿಬಿ ಕಚೇರಿಗೆ ಕರೆತಂದು ಅವರನ್ನು ವಿಚಾರಣೆಗೆ ಒಳಪಡಿಸಿ, ರಾತ್ರಿ ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net