ವಿಚಾರಣೆಗೆ ಸಹಕರಿಸದ ರಾಗಿಣಿ

Ragini
Published on

ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ಸಿಲುಕಿಕೊಂಡಿರುವ ನಟಿ ರಾಗಿಣಿ ಅವರ ಕಸ್ಟಡಿ ಅವಧಿ ಇಂದು ಮುಕ್ತಾಯವಾಗುತ್ತಿದ್ದು, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿ, ಬೆನ್ನುನೋವಿನ ಸಮಸ್ಯೆ ಇದೆ ಎಂದು ವಿಚಾರಣೆಗೆ ಸಹಕರಿಸುತ್ತಿಲ್ಲ. ಹೀಗಾಗಿ, ಅವರ ಹೇಳಿಕೆ ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಸೋಮವಾರ ಕಸ್ಟಡಿ ಅವಧಿ ಮುಗಿಯಲಿದೆ. ಸಂಜೆ ವೇಳೆಗೆ ಕೋರ್ಟ್​ಗೆ ಹಾಜರುಪಡಿಸಿ, ಮತ್ತೆ ವಶಕ್ಕೆ ಪಡೆಯಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ 2ನೇ ಆರೋಪಿ ನಟಿ ರಾಗಿಣಿ ದ್ವಿವೇದಿ ಹಾಗೂ ಅವರ ಆಪ್ತ ರವಿಶಂಕರ್, ಸೆನೆಗಲ್ ಮೂಲದ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್, ವಿರೇನ್ ಖನ್ನಾ ಹಾಗೂ ಸಂಜನಾ ಗಲ್ರಾನಿ ಸ್ನೇಹಿತ ರಾಹುಲ್​ನನ್ನು ಭಾನುವಾರವೂ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.

ಕೆಪಿಎಲ್ ಫಿಕ್ಸಿಂಗ್ ನಂಟು ಶಂಕೆ: 2018ರ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಗಿಣಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆಕೆಯ ಮೊಬೈಲ್ ಪರಿಶೀಲನೆ ನಡೆಸಲಾಗಿದೆ. ಬಳ್ಳಾರಿ ಟಸ್ಕರ್ಸ್ ತಂಡದ ಆಟಗಾರರ ಜತೆ ಪಾರ್ಟಿ ಮಾಡಿದ್ದಳು. ಫ್ರೇಜರ್ ಟೌನ್​ನಲ್ಲಿರುವ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಳು ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net