

Radhika Yadav: ತಂದೆಯಿಂದಲೇ ಗುಂಡೇಟಿಗೆ ಬಲಿಯಾದ ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಪ್ರಕರಣ ದೇಶದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಹೆತ್ತ ಮಗಳನ್ನೇ ಕೊಲ್ಲುವಷ್ಟು ಸೇಡು ಆ ತಂದೆಗೆ ಏನಿತ್ತು ಎಂಬ ಪ್ರಶ್ನೆಗಳ ನಡುವೆಯೇ ಮೃತ ರಾಧಿಕಾ ನಟಿಸಿರುವ ಮ್ಯೂಸಿಕ್ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ನಿಗೂಢ ಕೊಲೆಗೆ ಮತ್ತೊಂದು ಆಯಾಮ ಸಿಕ್ಕಿದೆ.
ರಾಧಿಕಾ (25) ತುಂಬಾ ವರ್ಷಗಳಿಂದ ನಡೆಸುತ್ತಿರುವ ಟೆನಿಸ್ ಅಕಾಡೆಮಿಯ ಬಗ್ಗೆ ಅವರ ತಂದೆಗೆ ಮನಸ್ತಾಪ ಇತ್ತು. ಅದನ್ನು ಮುಚ್ಚುವಂತೆ ಹೇಳಿದರು ಆಕೆ ನಿರ್ಲಕ್ಷಿಸಿದ್ದಳು. ಇದೇ ವಿಚಾರವಾಗಿ ದೀರ್ಘಕಾಲದಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಇದೇ ವಿವಾದ ಈ ಕೊಲೆ ಕಾರಣ ಎಂದು ಗುರುಗ್ರಾಮ ಪೊಲೀಸರು ಹೇಳಿದ್ದಾರೆ. ಆದರೆ, ಇದೀಗ ಮ್ಯೂಸಿಕ್ ವಿಡಿಯೋ ಬಹಿರಂಗವಾಗಿದ್ದು, ರಾಧಿಕಾ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ಮನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂಬ ಮತ್ತೊಂದು ಕಾರಣ ಚರ್ಚೆಯಾಗುತ್ತಿದೆ.
"ಕಾರ್ವಾನ್" ಎಂಬ ಶೀರ್ಷಿಕೆ ಅಡಿಯಲ್ಲಿ ಈ ಮ್ಯೂಸಿಕ್ ವಿಡಿಯೋವನ್ನು ಕಲಾವಿದ ಇನಾಮ್ ಒಂದು ವರ್ಷದ ಹಿಂದೆಯೇ ಬಿಡುಗಡೆ ಮಾಡಿದರು. ಜೀಶನ್ ಅಹ್ಮದ್ ನಿರ್ಮಿಸಿದ ಈ ವಿಡಿಯೋವನ್ನು LLF ರೆಕಾರ್ಡ್ಸ್ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ರಾಧಿಕಾ, ಇನಾಮ್ ಜೊತೆಗೆ ಹಲವಾರು ಪ್ರಣಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುವಾರ (ಜುಲೈ 10) ಗುರುಗ್ರಾಮ್‌ನ ಸುಶಾಂತ್ ಲೋಕ್ ಪ್ರದೇಶದಲ್ಲಿರುವ ಕುಟುಂಬದ ಮನೆಯಲ್ಲಿ ರಾಧಿಕಾ ಅವರನ್ನು ಅವರ ತಂದೆ ಗುಂಡು ಹಾರಿಸಿ ಕೊಂದರು. ಎರಡು ವರ್ಷಗಳ ಹಿಂದೆ ಆದ ಗಾಯದಿಂದಾಗಿ ಟೆನಿಸ್ ವೃತ್ತಿಜೀವನದಿಂದ ದೂರ ಉಳಿದಿದ್ದ ರಾಧಿಕಾ, ಸೋಶಿಯಲ್ ಮೀಡಿಯಾ ಇನ್ಫ್ಲಯೆನ್ಸರ್ ಆಗಲು ಬಯಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಆಗಾಗ ಇನ್ಸ್ಟಾಗ್ರಾಮ್ನಲ್ಲಿ ರೀಲ್‌ಗಳನ್ನು ರಚಿಸಿ, ಅಪ್‌ಲೋಡ್ ಮಾಡುತ್ತಿದ್ದರು.
ತಮ್ಮ ಮಗಳು ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ತಂದೆ ದೀಪಕ್ ಅಸಮಾಧಾನಗೊಂಡಿದ್ದರು ಮತ್ತು ರೀಲ್‌ಗಳನ್ನು ಅಳಿಸಲು ಸಹ ಕೇಳಿಕೊಂಡಿದ್ದರು. ಇದರ ನಡುವೆ ರಾಧಿಕಾ ಟೆನಿಸ್ ಅಕಾಡೆಮಿ ನಡೆಸುತ್ತಿರುವುದು ಕೂಡ ದೀಪಕ್ಗೆ ಇಷ್ಟವಿರಲಿಲ್ಲ. ಆಕೆಯ ಆರ್ಥಿಕ ಸ್ವಾತಂತ್ರ್ಯ ಮತ್ತು ಮಗಳ ದುಡಿಮೆಯಲ್ಲಿ ಬದುಕುತ್ತಿದ್ದೀಯಾ ಎಂಬ ಜನರ ಕೊಂಕು ಮಾತುಗಳು ದೀಪಕ್ ಮನಸ್ಸಿಗೆ ನಾಟಿತ್ತು. ಮಗಳ ನಡತೆಯ ಬಗ್ಗೆಯೂ ಜನರು ಮಾತನಾಡಿಕೊಳ್ಳುತ್ತಿದ್ದರು. ಇದೆಲ್ಲವನ್ನು ಸಹಿಸದೇ ಮಗಳನ್ನು ಗುಂಡಿಟ್ಟು ಕೊಂದಿರುವುದಾಗಿ ದೀಪಕ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಗುರುವಾರ (ಜುಲೈ 10) ರಾಧಿಕಾ ತನ್ನ ತಾಯಿಯ ಹುಟ್ಟುಹಬ್ಬದಂದು ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ, ದೀಪಕ್ a.32 ಬೋರ್ ಪರವಾನಗಿ ಪಡೆದ ರಿವಾಲ್ವರ್‌ನಿಂದ ಐದು ಗುಂಡು ಹಾರಿಸಿದನು. ಮೂರು ಗುಂಡುಗಳು ರಾಧಿಕಾ ಅವರ ಬೆನ್ನಿಗೆ ತಗುಲಿ ಆಕೆ ಸ್ಥಳದಲ್ಲೇ ಮೃತಪಟ್ಟಳು. ರಾಧಿಕಾ ಅವರ ಚಿಕ್ಕಪ್ಪ ಕುಲದೀಪ್ ಯಾದವ್ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ನಡೆದಾಗ ರಾಧಿಕಾ ಅವರ ತಾಯಿ ಮಂಜು ಯಾದವ್ ಅದೇ ಮಹಡಿಯಲ್ಲಿದ್ದರು. ಘಟನೆಯ ಸಮಯದಲ್ಲಿ ಅವರ ಮಗ ಧೀರಜ್ ಮನೆಯಲ್ಲಿ ಇರಲಿಲ್ಲ.
ಆರಂಭದಲ್ಲಿ, ರಾಧಿಕಾ ಅವರ ತಾಯಿ ಪೊಲೀಸರಿಗೆ ಹೇಳಿಕೆ ನೀಡಲು ನಿರಾಕರಿಸಿದರು. ನಂತರ, ತಮ್ಮ ಹೇಳಿಕೆ ದಾಖಲಿಸಿದರು. ಘಟನೆ ನಡೆದ ದಿನ ರಾಧಿಕಾ ತಾಯಿ ಜ್ವರದಿಂದ ಬಳಲುತ್ತಿದ್ದರು ಮತ್ತು ತಮ್ಮ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಗುಂಡಿನ ಶಬ್ಧ "ಪ್ರೆಶರ್ ಕುಕ್ಕರ್ ಬ್ಲಾಸ್ಟ್" ಶಬ್ದದಂತೆ ಕೇಳಿಸಿತು ಎಂದು ಹೇಳಿದರು. ರಾಧಿಕಾ ಉತ್ತಮ ವ್ಯಕ್ತಿತ್ವ ಹೊಂದಿದ್ದಳು ಮತ್ತು ಕುಟುಂಬಕ್ಕೆ ಎಂದಿಗೂ ಅಪಖ್ಯಾತಿ ತರಲಿಲ್ಲ ಅಂತಾನೂ ಹೇಳಿದ್ದಾರೆ.
ಅಂದಹಾಗೆ, ರಾಧಿಕಾ ವಿವಿಧ ಟೆನಿಸ್ ಪಂದ್ಯಾವಳಿಗಳಲ್ಲಿ ಹರಿಯಾಣ ಮತ್ತು ದೇಶವನ್ನು ಪ್ರತಿನಿಧಿಸಿದ್ದರು ಮತ್ತು ಹಲವಾರು ಪದಕಗಳು ಮತ್ತು ಪುರಸ್ಕಾರಗಳನ್ನು ಗೆದ್ದಿದ್ದರು. ಆದಾಗ್ಯೂ, ಎರಡು ವರ್ಷಗಳ ಹಿಂದೆ, ಅವರ ಭುಜಕ್ಕೆ ಗಾಯವಾದ ಹಿನ್ನೆಲೆಯಲ್ಲಿ ಕ್ರೀಡೆಗಳಿಂದ ದೂರ ಸರಿಯಬೇಕಾಯಿತು. ಬಳಿಕ ಟೆನಿಸ್ ಅಕಾಡೆಮಿ ಸ್ಥಾಪಿಸಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. (ಏಜೆನ್ಸೀಸ್)