ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೈರಸಿಯಾದ ರಾಧೇ

Radhe - Final
Published on

ಮುಂಬೈ: ಮೊದಲೇ ಹೇಳಿದ್ದರು ಸಲ್ಮಾನ್​. ಚಿತ್ರವನ್ನು ಓಟಿಟಿಗಳಲ್ಲೇ ನೋಡಿ, ಅನ್ಯಮಾರ್ಗಗಳಲ್ಲಿ ಚಿತ್ರ ನೋಡುವುದಕ್ಕೆ ಸಿಕ್ಕರೆ ನಿರಾಕರಿಸಿ ಎಂದು ಹೇಳಿದ್ದರು. ಚಿತ್ರದ ಪೈರಸಿ ಆಗುತ್ತದೆ ಎಂದು ಅವರಿಗೆ ಖಾತ್ರಿ ಇತ್ತೇನೋ? ಅದೇ ಕಾರಣಕ್ಕೆ ಪೈರಸಿಯನ್ನು ಪ್ರೋತ್ಸಾಹಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದೀಗ ನಿಜವಾಗಿದೆ.

ಗುರುವಾರವಷ್ಟೇ ಬಿಡುಗಡೆಯಾಗಿದ್ದ ಸಲ್ಮಾನ್ ಅಭಿನಯದ ರಾಧೇ ಪೈರಸಿಯಾಗಿದೆ. ಕೆಲವು ವೆಬ್​ಸೈಟ್​ಗಳಲ್ಲದೆ, ಟೆಲಿಗ್ರಾಮ್​ಗಳಲ್ಲೂ ಚಿತ್ರ ಸಿಗುತ್ತಿದೆ ಎಂದು ಸಲ್ಮಾನ್​ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಕೆಲವರು ಪೈರಸಿ ಅವತರಣಿಕೆಯ ಫೋಟೋಗಳನ್ನು ಮತ್ತು ಸ್ಕ್ರೀನ್​ಶಾಟ್​ಗಳನ್ನು ಪೋಸ್ಟ್​ ಮಾಡಿ, ಆದಷ್ಟು ಬೇಗ ಅದನ್ನು ನಿಲ್ಲಿಸುವುದಕ್ಕೆ ಮನವಿ ಸಲ್ಲಿಸಿದ್ದಾರೆ.

ಇನ್ನು, ಚಿತ್ರದ ಬಗ್ಗೆ ಯಾರಿಗೂ ಒಳ್ಳೆಯ ಅಭಿಪ್ರಾಯಗಳೇನಿಲ್ಲ. ವಿಮರ್ಶಕರಷ್ಟೇ ಅಲ್ಲ, ಸಾರ್ವಜನಿಕರು ಸಹ ಚಿತ್ರ ಸಾಧಾರಣವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಎಂಡಿಬಿಯಲ್ಲಿ ಚಿತ್ರಕ್ಕೆ ಕೆಟ್ಟ ರೇಟಿಂಗ್ ಸಿಕ್ಕಿದ್ದು, ಸಲ್ಮಾನ್​ ವೃತ್ತಿಜೀವನದಲ್ಲೇ ಅತ್ಯಂತ ಕೆಟ್ಟ ಚಿತ್ರ ಎಂದು ಹೇಳಲಾಗುತ್ತಿದೆ. 10ಕ್ಕೆ ಕೇವಲ 2.5 ರೇಟಿಂಗ್​ ಮಾತ್ರ ಸಿಕ್ಕಿದ್ದು, ಇದು ಸಲ್ಮಾನ್​ ಅವರ ಇದುವರೆಗಿನ ಚಿತ್ರಗಳಲ್ಲೇ ಅತ್ಯಂತ ಕಡಿಮೆ ರೇಟಿಂಗ್​ ಅಂತೆ.

ರಾಧೇ  ಚಿತ್ರದಲ್ಲಿ ಸಲ್ಮಾನ್​ಗೆ ನಾಯಕಿಯಾಗಿ ದಿಶಾ ಪಠಾಣಿ ನಟಿಸಿದ್ದು, ಜಾಕಿ ಶ್ರಾಫ್​, ರಣದೀಪ್​ ಹೂಡಾ ಮುಂತಾದವರಿದ್ದಾರೆ. ಈ ಚಿತ್ರವನ್ನು ಸಲ್ಮಾನ್​ ಖಾನ್ ತಮ್ಮ ಸಲ್ಮಾನ್​ ಖಾನ್​ ಫಿಲಂಸ್​ ಬ್ಯಾನರ್​ನಡಿ ನಿರ್ಮಿಸಿದ್ದು, ಪ್ರಭುದೇವ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net